ಡೈಲಿ ವಾರ್ತೆ:24 ಏಪ್ರಿಲ್ 2023
ಎ.25 ರಂದು ವಕ್ವಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ: ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯದ “ಶಿವಧೂತ ಗುಳಿಗ” ನಾಟಕ ಪ್ರದರ್ಶನ
ಕುಂದಾಪುರ:ತಾಲೂಕಿನ ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ ಎಪ್ರಿಲ್ 25 ಮಂಗಳವಾರ ನಡೆಯಲಿದೆ.
ಅಂದು ಬೆಳಿಗ್ಗೆ 9ಗಂಟೆಯಿಂದ ಶ್ರೀ ದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ಕಲಾ ಹೋಮ, ಶತರುದ್ರಾಭೀಷೇಕ ಹಾಗೂ ನಾಗದೇವರಿಗೆ ಕಲಾಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ಗಂಟೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ಐತಾಳ್ ಸಹೋದರಿಯರು ಕೋಟೇಶ್ವರ ಇವರಿಂದ ನಡೆಯಲಿದೆ.
ಸಂಜೆ 4 ಗಂಟೆಗೆ ಧಾರ್ಮಿಕ ಸಭೆ, ಹಾಗೂ ರಂಗಮಂಟಪ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ವಹಿಸಲಿದ್ದಾರೆ. ರಂಗಮಂಟಪ ಉದ್ಘಾಟನೆಯನ್ನು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಲಿದ್ದಾರೆ. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ದಾನಿಗಳನ್ನು ಸನ್ಮಾನಿಸಲಿದ್ದಾರೆ, ಆಯುರ್ವೇದ ವೈದ್ಯರು, ಧಾರ್ಮಿಕ ಪ್ರವಚನಕಾರರಾದ ಡಾ.ವಿಜಯ ಮಂಜರು ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಸಂಜೆ 5 ಗಂಟೆಗೆ ವಿಜಯಕುಮಾರ್ ಕೊಡಿಯಾಲ್ ಬೈಲು ನಿರ್ದೇಶನದ ಕಲಾಸಂಗಮ ಕಲಾವಿದರಿಂದ ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯದ “ಶಿವಧೂತ ಗುಳಿಗ” ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 8 ಗಂಟೆಗೆ ರಂಗಪೂಜೆ, ಉತ್ಸವ ಬಲಿ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.