ಡೈಲಿ ವಾರ್ತೆ:29 ಏಪ್ರಿಲ್ 2023

ಬಂಟ್ವಾಳ ಬಿಜೆಪಿ ಕಚೇರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಭೇಟಿ

ಬಂಟ್ವಾಳ: ಬಂಟ್ವಾಳದಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆಯ ಜತೆ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮತವಾಗಿ ಪರಿವರ್ತಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ಬಂಟ್ವಾಳ ಬಿಜೆಪಿ ಕಚೇರಿಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮತ್ತೆ ಪಿಎಫ್‌ಐ ಬೆಳೆಯುತ್ತದೆ. ಮುಸ್ಲಿಂಮರ ೪ ಶೇ. ಮೀಸಲಾತಿಯ ವಿಚಾರವನ್ನು ಕಾಂಗ್ರೆಸ್ ತಿರುಚುವ ಕಾರ್ಯ ಮಾಡುತ್ತಿದೆ. ಇದನ್ನು ಜನರಿಗೆ ಅರ್ಥ ಮಾಡಿಸಬೇಕಾಗಿದೆ,
ಈಗಾಗಲೇ ಬಿಜೆಪಿಯನ್ನು ಎಲ್ಲಾ ವರ್ಗದ ಜನ ಒಪ್ಪಿಕೊಂಡಿದ್ದಾರೆ,
ತ್ರಿವಳಿ ತಲಾಖ್ ಕಾನೂನಿಂದಾಗಿ ಮುಸ್ಲಿಂ ಮಹಿಳೆಯರು ಕೂಡ ಬಿಜೆಪಿಯನ್ನು ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದಾರೆ ಎಂದರು.

ರಾಷ್ಟ್ರ ನಾಯಕರಾದ ಮೋದಿ, ಅಮಿತ್ ಷಾ, ನಡ್ಡಾ ಹೀಗೆ ಎಲ್ಲಾ ನಾಯಕರು ತಮ್ಮ ಸಮಯವನ್ನು ಕರ್ನಾಟಕಕ್ಕೆ ಮೀಸಲಿಟ್ಟಿದ್ದು, ಕಾರ್ಯಕರ್ತರು ಪೂರ್ಣ ಪ್ರಮಾಣದ ಶ್ರಮದೊಂದಿಗೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾತನಾಡಿ, ಯುವಕರ ಕಣ್ಮಣಿ, ದಕ್ಷ ಅಧಿಕಾರಿ ಅಣ್ಣಾಮಲೈ ಅವರು ಬಂಟ್ವಾಳದ ಕುರಿತು ವಿಶೇಷ ಅಭಿಮಾನ ಹೊಂದಿದ್ದು, ಇಲ್ಲಿನ ವಿಷಮ ಪರಿಸ್ಥಿತಿಯಲ್ಲಿ ಅವರು ದಕ್ಷತೆಯಿಂದ ಕೆಲಸ ನಿರ್ವಹಿಸಿರುವುದನ್ನು ಜನತೆ ಈಗಲೂ ನೆನಪಿಸಿಕೊಳ್ಳುತ್ತಾರೆ ಎಂದರು.

ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ್, ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್ ಉಪಸ್ಥಿತರಿದ್ದರು. ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.