ಡೈಲಿ ವಾರ್ತೆ:01 ಮೇ 2023
‘ಮನ್‌ಕಿಬಾತ್’ ಪ್ರದರ್ಶನದ ಕುರಿತು ಬಿಜೆಪಿಯ ಗುಂಪುಗಳ ನಡುವೆ ಜಗಳ: ಇಬ್ಬರಿಗೆ ಗಾಯ
ಚೆನ್ನೈ: ಬಿಜೆಪಿ ಸದಸ್ಯರ ಎರಡು ಗುಂಪುಗಳ ನಡುವೆ ತಮಿಳುನಾಡಿನ ಧರಪುರಂ ಎಂಬಲ್ಲಿ ರವಿವಾರ ಜಗಳ ನಡೆದ ವರದಿಯಾಗಿದೆ. ಬಿಜೆಪಿಗರ ಈ ಗುದ್ದಾಟಕ್ಕೆ ಹಿಂದು ಮಕ್ಕಳ್ ಕಚ್ಚಿ ಸದಸ್ಯರೂ ಸೇರಿಕೊಂಡರೆಂದು ವರದಿಯಾಗಿದೆ. ಇಬ್ಬರು ಹಿಂದು ಮಕ್ಕಳ್ ಕಚ್ಚಿ ಸದಸ್ಯರು ಘಟನೆಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು indiatoday ವರದಿ ಮಾಡಿದೆ.
ಬಿಜೆಪಿಯ ತಿರುಪ್ಪುರ್ ದಕ್ಷಿಣ ಜಿಲ್ಲಾ ಮುಖ್ಯಸ್ಥ ಮಂಗಳಂ ರವಿ ಹಾಗೂ ಪಕ್ಷದ ರಾಜ್ಯ ಪದಾಧಿಕಾರಿ ಕೊಂಗು ರಮೇಶ್ ನಡುವೆ ಮೊದಲು ಜಗಳ ಆರಂಭವಾಗಿತ್ತು. ಕೊಂಗು ರಮೇಶ್ ಅವರಿಗೆ ಸೇರಿದ್ದ ಮಳಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ನ 100ನೇ ಸಂಚಿಕೆಯ ನೇರ ಪ್ರಸಾರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ರಾತ್ರಿ ಸುಮಾರು 8 ಗಂಟೆಗೆ ಮಂಗಳಂ ರವಿ ಮತ್ತವರ ಸಹಚರರು ಕೊಂಗು ರಮೇಶ್ ಅವರ ಮಳಿಗೆಗೆ ಹೋಗಿ ಮನ್ ಕಿ ಬಾತ್ ಪ್ರದರ್ಶನ ಕುರಿತು ಜಗಳ ಪ್ರಾರಂಭಿಸಿದ್ದರು. ಈ ಜಗಳ ನಂತರ ಕೈಕೈಮಿಸಲಾಯಿಸುವ ಹಂತಕ್ಕೆ ಹೋಗಿ ಇತ್ತಂಡಗಳೂ ಮರದ ತುಂಡು ಬಳಸಿ ಹಲ್ಲೆ ಮಾಡಲು ಆರಂಭಿಸಿದ್ದವು.
ಆ ಸಂದರ್ಭ ಅಲ್ಲಿದ್ದ ಹಿಂದು ಮಕ್ಕಳ್ ಕಚ್ಚಿ ಸದಸ್ಯರೂ ಜಗಳದಲ್ಲಿ ಸೇರಿಕೊಂಡರು. ಪಕ್ಷದ ಜಿಲ್ಲಾ ಮುಖ್ಯಸ್ಥ ಈಶ್ವರನ್ ಹಾಗೂ ಸಂಘಟನಾ ಕಾರ್ಯದರ್ಶಿ ಶಂಕರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡೂ ಕಡೆಗಳು ದೂರು-ಪ್ರತಿ ದೂರು ದಾಖಲಿಸಿವೆ. ಈ ನಡುವೆ ಘಟನೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲ ದಾರಿಹೋಕರು ತೆಗೆದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪೊಲೀಸರು ತನಿಖೆ ಆರಂಭಿಸಿದ್ದಾರೆ.