ಡೈಲಿ ವಾರ್ತೆ: 05 ಮೇ 2023
ಮರುವಂತೆ: ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದ ಮೀನುಗಾರರು!
ಕುಂದಾಪುರ: ಮರವಂತೆ ಹೊರ ಬಂದರು ವಿಚಾರಕ್ಕೆ ಸಂಬಂಧಪಟ್ಟಂತೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದ ಮರವಂತೆ ಮೀನುಗಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಮರವಂತೆಯ ಶ್ರೀ ರಾಮ ಮಂದಿರದಲ್ಲಿ ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಕೆ.ಎಂ.ವಾಸುದೇವ ಖಾರ್ವಿ, ಅಪೂರ್ಣಗೊಂಡಿರುವ ಮರವಂತೆಯ ಕೇರಳ ಮಾದರಿಯ ಔಟ್ ಡೋರ್ ಬಂದರಿನ 2ನೇ ಹಂತದ ಕಾಮಗಾರಿಯನ್ನು ಚುನಾವಣೆ ಮುಗಿದ ತಕ್ಷಣ ಪ್ರಾರಂಭಿಸುವುದಾಗಿ, ಕಡಲ್ಕೊರೆತ ತಡೆಗೆ ಜಪಾನ್ ಮಾದರಿಯ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲು ಪ್ರಯತ್ನಿಸುವುದಾಗಿ ಹಾಗೂ ಮೀನುಗಾರರಿಗೆ ಸಕಾಲದಲ್ಲಿ ಸೀಮೆಎಣ್ಣೆ ಒದಗಿಸಲು ಕೇಂದ್ರ ಸರಕಾರದ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವ ಭರವಸೆಯನ್ನು ಸಂಸದ ಬಿ.ವೈ.ರಾಘವೇಂದ್ರ ನೀಡಿದ್ದಾರೆ. ಹೀಗಾಗಿ ಇಂದು ಮೀನುಗಾರರ ಸಭೆ ನಡೆಸಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ, ಆಶ್ವಾಸನೆ ಮೇರೆಗೆ ಮೀನುಗಾರರು ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.
ಮರವಂತೆ ಮೀನುಗಾರರು ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ ಬಳಿಕ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಹಾಲಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮತ್ತು ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮರವಂತೆಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದರು. ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು, ಮರವಂತೆ ಹೊರ ಬಂದರು 2ನೇ ಹಂತದ ಕಾಮಗಾರಿಯನ್ನು ಖುದ್ದು ನಿಂತು ಮಾಡಿಸುವುದಾಗಿಯೂ ಮತ್ತು ದೆಹಲಿಗೆ ಹೋಗಿ ಆದರೂ ಸರಿ ಇದಕ್ಕಿರುವ ಅಡೆತಡೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ. ಸಂಸದರ ಮೇಲೆ ವಿಶ್ವಾಸ ಇಟ್ಟು, ಅವರ ನೀಡಿರುವ ಭರವಸೆ ಹಿನ್ನಲೆಯಲ್ಲಿ ಚುನಾವಣೆ ಬಹಿಷ್ಕಾರದಿಂದ ಹಿಂದೆ ಸರಿದಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂಬರು ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಮರವಂತೆ ಮೀನುಗಾರರ ಸೇವಾ ಸಮಿತಿ ಮಾಜಿ ಅಧ್ಯಕ್ಷ ಪಿ.ಚಂದ್ರ ಖಾರ್ವಿ, ಮಾರ್ಕೇಟಿಂಗ್ ಸಮಿತಿ ಅಧ್ಯಕ್ಷ ಎಂ.ಶಂಕರ ಖಾರ್ವಿ ಉಪಾಧ್ಯಕ್ಷ ಸುರೇಶ ಖಾರ್ವಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಈಶ್ವರ ಖಾರ್ವಿ, ಸುರೇಶ ಖಾರ್ವಿ, ಶ್ರೀಧರ ಖಾರ್ವಿ, ಲಕ್ಷ್ಮಣ ಖಾರ್ವಿ, ಗಣೇಶ ಖಾರ್ವಿ ಉಪಸ್ಥಿತರಿದ್ದರು.