ಡೈಲಿ ವಾರ್ತೆ: 06 ಮೇ 2023
ಪವಿತ್ರ ಹಜ್ ಯಾತ್ರೆಗೆ ಮಂಗಳೂರಿನಿಂದ ನೇರ ವಿಮಾನ ಯಾನ ರದ್ದು – ಸಮಸ್ಯೆ ಸಿಲುಕಿದ ಕರಾವಳಿ ಭಾಗದ ಹಜ್ಜ್ ಯಾತ್ರಿಕರು!
ಮಂಗಳೂರು:ಪವಿತ್ರ ಹಜ್ ಯಾತ್ರಿಕರಿಗೆ ಶಾಕಿಂಗ್ ಸುದ್ದಿ ಇದಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ನೇರ ಪ್ರಯಾಣ ಅವಕಾಶವನ್ನು ರದ್ದುಪಡಿಸಲಾಗಿದೆ.
ಭಾರತೀಯ ಹಜ್ ಸಮಿತಿಯು ದೇಶದ ಹಲವಾರು ರಾಜ್ಯ ಗಳಲ್ಲಿನ ವಿಮಾನ ಹತ್ತುವ ಕೇಂದಗಳನ್ನು ರದ್ದು ಪಡಿಸಿದ್ದು, ಇದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಸಹ ಸೇರಿದೆ.
ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾತ್ರಿಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮಾನ ಹತ್ತುವ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಈ ಮೊದಲು ರಾಜ್ಯದ ಹಜ್ ಯಾತ್ರಿಗಳು ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್ ಮೂಲಕ ಹಜ್ ಯಾತ್ರೆಗೆ ತೆರಳುತ್ತಿದ್ದರು. ಇದೀಗ ಮಂಗಳೂರು ಪಾಯಿಂಟ್ ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.
ಇದರಿಂದಾಗಿ ಕರಾವಳಿ ಜಿಲ್ಲೆಗಳ ಯಾತ್ರಿಗಳು ತೊಂದರೆಗೆ ಸಿಲುಕಿದ್ದಾರೆ. ಭಾರತೀಯ ಹಜ್ ಸಮಿತಿಯು ಈ ಐದು ಜಿಲ್ಲೆಗಳ ಯಾತ್ರಿಗಳಿಗೆ ಕೇರಳದ ಕಣ್ಣೂರು, ಕೊಚ್ಚಿ, ಬೆಂಗಳೂರು ಹಾಗೂ ಚೆನ್ನೈ ಪಾಯಿಂಟ್ ಆಯ್ಕೆ ಮಾಡಿಕೊಳ್ಳಲು ತಿಳಿಸುತ್ತಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಯಾತ್ರೆಗೆ ಅವಕಾಶ ನೀಡುವುದರಿಂದ ಕರಾವಳಿ ಭಾಗದ ಯಾತ್ರಿಗಳಿಗೆ ಅನುಕೂಲ ಆಗುತ್ತದೆ. ಬೆಂಗಳೂರು ಅಥವಾ ಕಣ್ಣೂರು, ಕೊಚ್ಚಿ ವಿಮಾನ ನಿಲ್ದಾಣಗಳ ಮೂಲಕ ತೆರಳುವುದು ನಮಗೆ ಕಷ್ಟ ವಾಗುತ್ತದೆ. ಯಾತ್ರೆಗೆ ತೆರಳುವಾಗ ಮುಂಚಿತವಾಗಿ ನಾವು ಅಲ್ಲಿ ಹೋಗಿ ಉಳಿದು ಕೊಳ್ಳಲು ಸಮಸ್ಯೆಯಾಗುತ್ತದೆ ಎಂದು ಹಜ್ಜ್ ಯಾತ್ರಿಗಳ ನೋವನ್ನು ತೋಡಿಕೊಂಡಿದ್ದಾರೆ. ಸಮಿತಿಯ ಆದೇಶವನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.