ಡೈಲಿ ವಾರ್ತೆ: 06 ಮೇ 2023
ಬಿಜೆಪಿಯ ಆಡಳಿತದಿಂದ ಸಂಕಷ್ಟ ಅನಭವಿಸುವವರು ಕೇವಲ ಮುಸ್ಲಿಂ ಸಮುದಾಯದವರು ಎಂಬ ಭಾವನೆ ಬೇಡ, ಎಸ್.ಡಿ. ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎಮ್.ಕೆ. ಫೈಝಿ.
ಬಂಟ್ವಾಳ : ಬಿಜೆಪಿಯ ಆಡಳಿತದಿಂದ ಈ ದೇಶದ ದಲಿತರು, ಮುಸಲ್ಮಾನರು, ಕ್ರೈಸ್ತರು ಹಾಗೂ ಹಿಂದುಳಿದ ವರ್ಗದ ಎಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ಕೇವಲ ಮುಸಲ್ಮಾನರಿಗೆ ಮಾತ್ರ ತೊಂದರೆ ಎಂಬ ಭ್ರಮೆ ಬೇಡ ಅವರು ಪ್ರತಿಯೊಂದು ವಿಭಾಗದವರನ್ನು ಪರಸ್ಪರ ಎತ್ತಿಕಟ್ಟಿ ವಿಭಜಿಸುವ ಮೂಲಕ ದೇಶದ ಜನತೆಯನ್ನು ತನ್ನ ಗುಲಾಮಗಿರಿಲ್ಲಿ ಇರಿಸುವಂತೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಎಸ್.ಡಿ. ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎಮ್.ಕೆ. ಫೈಝಿ ಹೇಳಿದರು.
ಬಿ.ಸಿ.ರೋಡ್ ನ ಕೈಕಂಬದಲ್ಲಿ ಶುಕ್ರವಾರ ರಾತ್ರಿ ನಡೆದ ಎಸ್.ಡಿ. ಪಿ.ಐ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಬದಲಾವಣೆ ಆಗುತ್ತಿದೆ. ಕಾಲೇಜು, ಆಸ್ಪತ್ರೆ, ಕೈಗಾರಿಕಾ ಸಂಸ್ಥೆಗಳನ್ನು ತೆರೆಯುವ, ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆ ಅನುಷ್ಠಾನಕ್ಕೆ ತರುವ ದೇಶದ ಅಭಿವೃದ್ಧಿಯ ಬದಲಾವಣೆ ಅಲ್ಲ, ಅದು ಕೇವಲ ಜಾತಿ, ಧರ್ಮ, ಪಂಗಡದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗುತ್ತಿದೆ, ಭವ್ಯ ಭಾರತದ ಚರಿತ್ರೆಗಳನ್ನು ಪುರಾಣಗಳನ್ನಾಗಿ ಮತ್ತು ಪುರಾಣಗಳನ್ನು ಚರಿತ್ರೆಯನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ, ಶಾಸಕರನ್ನು ಖರೀದಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಅರಾಜಕತೆ ಸೃಷ್ಟಿಸಲಾಗುತ್ತಿದೆ, ಹಿರಿಯರು, ಮಹಿಳೆಯರು, ಮಕ್ಕಳು ಎಂಬುದನ್ನು ಕೂಡಾ ಪರಿಗಣಿಸದೆ ಕೇವಲ ಜಾತಿ – ಧರ್ಮ ದ ಆಧಾರದಲ್ಲಿ ಹಾಡು ಹಗಲೇ ನಡು ರಸ್ತೆಯಲ್ಲಿ ಕೊಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ, ಇವೆಲ್ಲದರ ಬಗ್ಗೆ ಪ್ರಶ್ನೆ ಮಾಡುವವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಹುದುಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇವೆಲ್ಲದಕ್ಕೂ ಪರ್ಯಾಯ ಶಕ್ತಿಯಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಪಕ್ಷವು ಸಂಪೂರ್ಣ ವಿಫಲವಾಗಿದ್ದು ಮುಂಬರುವ ದಿನಗಳಲ್ಲಿ ಎಸ್ಡಿಪಿಐ ಮೂಡಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ, ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲ್,
ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಮಾತನಾಡಿದರು.
ಪ್ರಮುಖರಾದ ಸಾಹುಲ್ ಹಮೀದ್ ಎಸ್.ಎಚ್, ಯೂಸುಫ್ ಆಲಡ್ಕ, ಖಲಂದರ್ ಪರ್ತಿಪ್ಪಾಡಿ, ಮುಸ್ತಾಕ್ ತಲಪಾಡಿ, ಐ.ಎಂ.ಆರ್. ಇಕ್ಬಾಲ್ ಗೂಡಿನ ಬಳಿ, ಝೀನತ್ ಗೂಡಿನ ಬಳಿ, ಶಾಹಿದಾ ತಸ್ನೀಂ, ಸಂಶಾದ್, ಪಿ.ಜೆ.ಇದ್ರೀಸ್, ಸಬೀನಾ ನಂದಾವರ, ಶರೀಫ್ ವಳವೂರು, ಅಬೂಬಕ್ಕರ್ ಮದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದರು.