ಡೈಲಿ ವಾರ್ತೆ: 06 ಮೇ 2023
ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ವಿರುದ್ಧ ಸ್ಪರ್ಧಿಸಿರುವ ಎಲ್ಲರೂ ಕ್ಷೇತ್ರದಿಂದ ಹೊರಗಿನವರು : ಹಾಜಿ.ಕೆ.ಎಂ. ಇಬ್ರಾಹಿಂ.
ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಹೊರಗಿನ ಕ್ಷೇತ್ರದ ಮತದಾರರು. ರೈ ಯವರು ಕ್ಷೇತ್ರದ ಮೂಲೆ ಮೂಲೆಗೂ ಚಿರಪರಿಚಿತರು. ಪ್ರತಿಯೊಬ್ಬರನ್ನೂ ಕರೆದು ಮಾತನಾಡಿಸುವ ಗುಣ ಅವರದ್ದು, ಇಂತಹ ವ್ಯಕ್ತಿತ್ವವನ್ನು ಮತ್ತೊಮ್ಮೆ ಗೆಲ್ಲಿಸುವ ಹೊಣೆ ಕ್ಷೇತ್ರದ ಮತದಾರರ ಮೇಲಿದೆ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಹಾಜಿ ಕೆ.ಎಂ. ಇಬ್ರಾಹಿಂ ಮಾಸ್ಟರ್ ಹೇಳಿದರು.
ಅವರು ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯಾರೇ ಬಂದು ತಮ್ಮ ಮನೆಗಳದ್ದಾಗಲೀ, ಸಂಸ್ಥೆಗಳದ್ದಾಗಲೀ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ರೈಗಳು ತಪ್ಪದೆ ಎಷ್ಟೇ ಹೊತ್ತಾದರೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅದು ಅವರ ಸದ್ಗುಣ. ಇಂತಹ ಸರಳ, ಸಜ್ಜನಿಕೆಯ ವ್ಯಕ್ತಿಯನ್ನು ಈ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವಂತೆ ನಾನು ಮತದಾರರಲ್ಲಿ ಕೋರುತ್ತೇನೆ ಎಂದು ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ, ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಪರಿಶಿಷ್ಟ ಪಂಗಡಗಳ ಘಟಕದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್, ಮಹಿಳಾ ವಿಭಾದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಪುರಸಭಾ ಮಾಜಿ ಅಧ್ಯಕ್ಷೆ ಜೋಸ್ಪಿನ್ ಡಿಸೋಜ, ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ,, ಸದಸ್ಯರಾದ ಮುಹಮ್ಮದ್ ನಂದರಬೆಟ್ಟು, ಲೋಲಾಕ್ಷ ಶೆಟ್ಟಿ, ಪ್ರಮುಖರುಗಳಾದ ಪರಮೇಶ್ವರ್ ಮೂಲ್ಯ, ಬಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.