ಡೈಲಿ ವಾರ್ತೆ:07 ಮೇ 2023

ಕುಂದಾಪುರ: “ಗರುಡ” ತಂಡದ ದರೋಡೆ ಆರೋಪಿಗೆ ಜಾಮೀನು

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ, ಬೈಂದೂರು ತಾಲೂಕು, ಮರವಂತೆ ಗ್ರಾಮದ, ಮರವಂತೆ ಬೀಚ್ ನೋಡಲು ಸಮುದ್ರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಮ್ಮದ್ ಇಮ್ರಾನ್ ಎಂಬವರ ಬಳಿ ಆರೋಪಿ ಮಜೀದ್ ಹಾಗೂ ಇತರರು ಬಂದು ಅವರ ಕಾರನ್ನು ಕೊಡಲು ಕೇಳಿದಾಗ ಇಮ್ರಾನ್ ರವರು ಕಾರನ್ನು ನೀಡಲು ನಿರಾಕರಿಸಿದಾಗ ಆರೋಪಿತರು ಇಮ್ರಾನ್ ರವರಿಗೆ ಚಾಕುವನ್ನು ತೋರಿಸಿ ಕಾರಿನ ಕೀ ಯನ್ನು ಕೊಡುವಂತೆ ಹೆದರಿಸಿ ಬಲತ್ಕಾರವಾಗಿ ಕಾರಿನ ಕೀ ಯನ್ನು ಕಸಿದುಕೊಂಡು ಕಾರನ್ನು ದರೋಡೆ ಮಾಡಿಕೊಂಡು ಹೋದದ್ದಲ್ಲದೇ ರೂ. 2,50,000/- ಹಣವನ್ನು ನೀಡಬೇಕು ಇಲ್ಲದಿದ್ದಲ್ಲಿ ಕಾರನ್ನು ಸುಟ್ಟು ಹಾಕುವುದಾಗಿ “ಗರುಡ” ಎಂಬ ಹೆಸರಿನ ತಂಡವನ್ನು ಕಟ್ಟಿಕೊಂಡು ಬೆದರಿಕೆ ಹಾಕಿ ಹಣ ವಸೂಲಿಗೆ ಬೇಡಿಕೆ ಇಟ್ಟಿರುತ್ತಾರೆ ಎಂದು ಆಪಾದಿಸಲಾಗಿತ್ತು.

ಪ್ರಕರಣದ ಆರೋಪಿ ಮಜೀದ್‍ನನ್ನು ಬಂಧಿಸಿದ ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಾನ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
“ಆರೋಪಿ ಮಜೀದ್ ಎಂಬುವವರು ನಿರಪರಾಧಿಯಾಗಿದ್ದು, ಈ ಪ್ರಕರಣಕ್ಕೂ ಆರೋಪಿಗೂ ಯಾವುದೇ ಸಂಬಂಧವಿಲ್ಲ, ಪೊಲೀಸರು ಆರೋಪಿಯನ್ನು ಈ ಪ್ರಕರಣದಲ್ಲಿ ಸುಖಾಸುಮ್ಮನೆ ಸೇರಿಸಿರುತ್ತಾರೆ” ಎಂದು ವಾದಿಸಲಾಗಿತ್ತು.
ಆರೋಪಿಯ ಪರ ವಕೀಲರ ವಾದವನ್ನು ಎತ್ತಿ ಹಿಡಿದ ಕುಂದಾಪುರದ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಮಜೀದ್‍ಗೆ ಜಾಮೀನು ಮಂಜೂರು ಮಾಡಿದೆ.
ಆರೋಪಿಯ ಪರವಾಗಿ ಕುಂದಾಪುರದ ವಕೀಲರಾದ ಬನ್ನಾಡಿ ಸೋಮನಾಥ ಹೆಗ್ಡೆ ಮತ್ತು ಶ್ಯಾಮಲ ದೇವಾಡಿಗ ವಾದಿಸಿದ್ದರು.