

ಡೈಲಿ ವಾರ್ತೆ: ಫೆ./17/2026
ಉಪ್ಪೂರು| ರಜತ ವರ್ಷದ ಸಂಭ್ರಮದಲ್ಲಿ ‘ಶಿವಾರ್ಪಣಂ’ – ಶಿವರಾತ್ರಿಯಂದು ಮಹಾಬಲೇಶ್ವರ ದೇವರಿಗೆ ನೃತ್ಯಾರ್ಚನೆ

ಉಡುಪಿ, ಫೆ.17: ಶ್ರೀ ಭ್ರಾಮರೀ ನಾಟ್ಯಾಲಯ ಅಮ್ಮುಂಜೆ ಇದರ ರಜತ ವರ್ಷದ ಅಂಗವಾಗಿ ಆಯೋಜಿಸಲಾದ ಐದನೇ ವಿಶೇಷ ಕಾರ್ಯಕ್ರಮ “ಶಿವಾರ್ಪಣಂ” ಶಿವರಾತ್ರಿಯಂದು ಭಕ್ತಿಭಾವಪೂರ್ಣವಾಗಿ ನೆರವೇರಿತು.

ಚಿತ್ತಾರಿ ಪ್ರದೇಶದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ನಡೆದ ಈ ನೃತ್ಯಾರ್ಪಣ ಕಾರ್ಯಕ್ರಮದಲ್ಲಿ ನಾಟ್ಯದಿದೇವನಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು. ಗೆಜ್ಜೆಯ ನಾದದೊಂದಿಗೆ ಬೆಳ್ಳಿ ಹೆಜ್ಜೆಯ ಸಂಭ್ರಮ ಮೂಡಿದ ಈ ಕಾರ್ಯಕ್ರಮ ಭಕ್ತರ ಮನಸೆಳೆಯಿತು.

ಕಾರ್ಯಕ್ರಮವನ್ನು ಉಪ್ಪೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಹೂವಯ್ಯ ಸರ್ವೆಗಾರ್, ಕಲಾಬಿಮಾನಿ ಶ್ರೀಮತಿ ಸ್ವರೂಪ್ ಹೆಗ್ಡೆ ಹಾಗೂ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಕರುಣಾಕರ್ ರಾವ್ ಉಪ್ಪೂರು ಉಪಸ್ಥಿತರಿದ್ದರು.
ಇದಾದ ಬಳಿಕ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭಕ್ತಿಪರ ಹಾಗೂ ಶೈವತತ್ವವನ್ನು ಪ್ರತಿಬಿಂಬಿಸುವ ನೃತ್ಯಪ್ರಸ್ತುತಿಗಳು ನಡೆಯಿತು. ಶಿವತತ್ವದ ವೈಭವವನ್ನು ನೃತ್ಯ ರೂಪದಲ್ಲಿ ಮನೋಜ್ಞವಾಗಿ ಅನಾವರಣಗೊಳಿಸಿದ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಟ್ಯಾಲಯದ ನಿರ್ದೇಶಕರು ಹಾಗೂ ಗುರುಗಳಾದ ವಿದ್ವಾನ್ ಶ್ರೀ ಕೆ. ಭವಾನಿ ಶಂಕರ್ ಅವರು ಸ್ವಾಗತ ಭಾಷಣ ಮಾಡಿ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಶ್ರೀ ಯೋಗೀಶ್ ಕೊಳಲಗಿರಿ ನಿರೂಪಿಸಿದರು.