ಡೈಲಿ ವಾರ್ತೆ: 12 ಮೇ 2023
ರಾಜ್ಯದ ಜನರಿಗೆ ಕರೆಂಟ್ ಶಾಕ್: ವಿದ್ಯುತ್ ದರದಲ್ಲಿ ಹೆಚ್ಚಳ, ಪ್ರತಿ ಯುನಿಟ್ ವಿದ್ಯುತ್‌ಗೆ 70 ಪೈಸೆ ಏರಿಕೆ !
ಬೆಂಗಳೂರು;ಎಲೆಕ್ಸನ್ ರಿಸಲ್ಟ್ ಗೆ ಮೊದಲೇ ರಾಜ್ಯದ ಜನರಿಗೆ ಕರೆಂಟ್ ಶಾಕ್ ಉಂಟಾಗಿದ್ದು, ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ 70 ಪೈಸೆ ಏರಿಕೆ ಮಾಡಲಾಗಿದೆ.
ಪ್ರತಿ ಯೂನಿಟ್ ವಿದ್ಯುತ್ ದರ 140 ಪೈಸೆ ಏರಿಕೆಗೆ ಎಸ್ಕಾಂ ಸಂಸ್ಥೆ ಮನವಿ ಮಾಡಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯುನಿಟ್ ವಿದ್ಯುತ್ ಗೆ 70 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
ಏಪ್ರಿಲ್ 1, 2023ರಿಂದ ಅನ್ವಯ ಆಗುವಂತೆ ನೂತನ ದರ ಏರಿಕೆ ಮಾಡುವುದಾಗಿ KERC ಹೇಳಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 200 ಯುನಿಟ್ ವಿದ್ಯುತ್ ಉಚಿತ ಭರವಸೆ ನೀಡಿತ್ತು. ಜನರು ಸಂತಸದಲ್ಲಿದ್ದರು. ಇದೀಗ ರಿಸಲ್ಟ್ ಗೆ ಮೊದಲೇ ವಿದ್ಯುತ್ ದರದಲ್ಲಿ ಏರಿಕೆ ಕಂಡಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ.
ನಾಳೆ ಮತ ಎಣಿಕೆ ಎಲ್ಲೆಡೆ ಕಟ್ಟೆಚ್ಚರ:
ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕಾ ಕಾರ್ಯವು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮವಹಿಸಲಾಗಿದೆ.
ರಾಜ್ಯದ 58,545 ಮತಗಟ್ಟೆಗಳಲ್ಲಿನ ಮತದಾರರು ಅಖಾಡದಲ್ಲಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಫಲಿತಾಂಶ ನಾಳೆ ಪ್ರಕಟವಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.