ಡೈಲಿ ವಾರ್ತೆ:14 ಮೇ 2023
ಮೊದಲ ಕ್ಯಾಬಿನೆಟ್‌ನಲ್ಲೇ ಕಾಂಗ್ರೆಸ್ ನ ಐದು ಗ್ಯಾರಂಟಿ ಭರವಸೆ ಜಾರಿಗೆ – ಸಿದ್ದರಾಮಯ್ಯ
ಬೆಂಗಳೂರು: ಮೊದಲನೇ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ನೀಡಿ ಗ್ಯಾರಂಟಿಗಳ ಜಾರಿಗೆ ಆದೇಶ ಹೊರಡಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗೆಲುವು ಕೇವಲ ಕಾಂಗ್ರೆಸ್ ಗೆಲುವು ಮಾತ್ರವಲ್ಲ, ಏಳು ಕೋಟಿ ಕನ್ನಡಿಗರ ಗೆಲುವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಾರದರ್ಶಕ ಆಡಳಿತ ನೀಡಲಿದೆ. ನಮ್ಮ ಐದು ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ ಎಂದರು.
ಬಿಜೆಪಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಬಂದವರು ಎಂದು ಟೀಕಿಸಿದ ಅವರು, ದೇಶವನ್ನು ಆರ್ಥಿಕ ದಿವಾಳಿ ಮಾಡಿದ್ದು ಬಿಜೆಪಿ ಹಾಗೂ
ಪ್ರಧಾನಿ ಮೋದಿ.
ಕೇಂದ್ರ ಸರಕಾರ 155 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಹಾಗಾದರೆ ದೇಶ ದಿವಾಳಿ ಮಾಡಿದ್ದು ಯಾರು, ಮೋದಿ ನೂರು ಸಾರಿ ರಾಜ್ಯಕ್ಕೆ ಬಂದರೂ ಏನೂ ಆಗುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಅತಂತ್ರ ವಿಧಾನಸಭೆಯಾದ ಸಂದರ್ಭದಲ್ಲಿ ಸುಭದ್ರ ಸರಕಾರ ಕೊಡಲಾಗಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಸುಭದ್ರ ಸರಕಾರ ಅಸಾಧ್ಯ, ಸುಭದ್ರ ಸರಕಾರ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. 2013ರಲ್ಲಿ ಐದು ವರ್ಷ ಉತ್ತಮ ಆಡಳಿತ ಮಾಡಿದ್ದೆವು. ಬಿಜೆಪಿ, ಕುಮಾರಸ್ವಾಮಿ ಅವಧಿಯಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಬಹುಮತವನ್ನು ಕಾಂಗ್ರೆಸ್‌ಗೆ ಜನರು ನೀಡಿದ್ದಾರೆ ಎಂದು ತಿಳಿಸಿದರು.
ಜನರ ನಿರೀಕ್ಷೆಗೆ ತಕ್ಕಂತೆ ಸರಕಾರ ನಡೆಸಬೇಕು. ಕೊಟ್ಟ ಮಾತನ್ನು ಉಳಿಸಬೇಕು. ಬಿಜೆಪಿ ಪಕ್ಷವು ಕರ್ನಾಟಕಕ್ಕೆ ಕಳಂಕ ತಂದಿದ್ದಕ್ಕೆ ಜನ ರೋಸಿ ಹೋಗಿದ್ದರು. ಬದಲಾವಣೆ ಬಯಸಿ ಕಾಂಗ್ರೆಸ್ ಪರವಾದ ಗಾಳಿ ಬೀಸಿತ್ತು. ಇದರಿಂದ 135 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಕಾಂಗ್ರೆಸ್‌ಗೆ ಎಲ್ಲಾ ಜಾತಿ ಧರ್ಮದ ಮತಗಳು ಬಂದಿವೆ. ಎಲ್ಲಾ ಜಾತಿಯ ಬಡವರು ಮತ ನೀಡಿದ್ದಾರೆ. ಐದು ವರ್ಷದ ಅವಧಿಯನ್ನು ಜನ ಪರವಾಗಿ ಉಪಯೋಗ ಮಾಡಬೇಕು ಎಂದು ಅವರು ಹೇಳಿದರು.