ಡೈಲಿ ವಾರ್ತೆ:15 ಮೇ 2023
ಕೆ ಎಸ್ ಈಶ್ವರಪ್ಪಗೆ ಕಜಿಕಿಸ್ತಾನದಿಂದ ಬೆದರಿಕೆ ಕರೆ – ದೂರು ದಾಖಲು!
ಶಿವಮೊಗ್ಗ: ವಿದೇದಿಂದ ಮಿಸ್ ಕಾಲ್ ಬೆದರಿಕೆ ಬಂದಿದೆ ಎಂದು ಆರೋಪಿಸಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಎಸ್ಪಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ಅವರು, ‘ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಬಂದಿತ್ತು. ಆ ಬಳಿಕ ಓರ್ವನನ್ನು ಬಂಧನ ಮಾಡಿದಾಗ ಆತನ ಬಳಿ ಸಾಕಷ್ಟು ದಾಖಲಿ ಸಿಕ್ಕಿತ್ತು. ಆತನ ಬಳಿ ಸಿಕ್ಕ ಪಟ್ಟಿಯಲ್ಲಿ ಕೊಲೆ ಮಾಡುವವರ ಲಿಸ್ಟ್ ನಲ್ಲಿ ನನ್ನ ಹೆಸರು ಕೂಡ ಇತ್ತು. ನಾನು ಕೂಡ ದೂರು ಕೊಟ್ಟಿದ್ದೆ. ನಿನ್ನೆ ಕೂಡ ರಾತ್ರಿ ಕಝಕಿಸ್ತಾನದ ಒಂದು ನಂಬರ್ ನಿಂದ ಕರೆ ಬಂದಿದೆ. ರಾತ್ರಿ ಮತ್ತು ಬೆಳಗ್ಗೆ ಐದಾರು ಬಾರಿ ಕರೆ ಮಾಡಿದ್ದಾರೆ. ಈ ಸಂಬಂಧ ಎಸ್ಪಿಗೆ ತನಿಖೆ ಮಾಡಲು ದೂರು ಕೊಟ್ಟಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರದ್ರೋಹಿ ಚಟುವಟಿಕೆ ಆರಂಭವಾಗುವ ಲಕ್ಷಣ ಇದು. ರಾಜ್ಯ ಸರ್ಕಾರ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.
ಇನ್ನು ಬೆಳಗಾವಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಬೆಳಗಾವಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಹರೀಶ್ ರಾವ್ ಎಂಬ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಬಿಜೆಪಿ ಎಂಬ ಕಾರಣಕ್ಕೆ ಹಲ್ಲೆ ನಡೆಸಿ, ಗುಂಡಾಗಿರಿ ಮಾಡಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಎಸ್ಪಿಗೆ ದೂರು ನೀಡಿದ್ದೇನೆ’ ಎಂದರು.