ಡೈಲಿ ವಾರ್ತೆ: 17 ಮೇ 2023

ಬಂಟ್ವಾಳ: ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ಮನೆಗೆ ಮಂಗಳೂರು ಕ್ಷೇತ್ರದ ಶಾಸಕ‌ನಾಗಿ ಆಯ್ಕೆಯಾದ ಯು.ಟಿ.ಖಾದರ್ ಬೇಟಿ ನೀಡಿ ಅಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪೂಜಾರಿ ಅವರು ಖಾದರ್ ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಯು.ಟಿ.ಖಾದರ್ ನಾನು ವಿದ್ಯಾರ್ಥಿ ನಾಯಕನಾದ ದಿನದಿಂದ ಇದುವರೆಗೂ ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರ ಸಲಹೆಯಂತೆ ನಡೆದುಕೊಂಡು ಬಂದಿದ್ದೇನೆ, ನನ್ನ ರಾಜಕೀಯ ಬೆಳವಣಿಗೆಗೆ ಕಾರಣೀಕರ್ತರಾದ ಕಾಂಗ್ರೆಸ್ ಪಕ್ಷದ ಸರ್ವ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಸಂಘಟನಾತ್ಮಕ ಮಟ್ಟದಲ್ಲಿ ಬೆಳೆಸುತ್ತೇನೆ ಎಂದರು.

ಸರಕಾರದ ಎಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ , ಸೌಹಾರ್ದ, ಸಾಮರಸ್ಯದ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಅಂಬೇಡ್ಕರ್ ವಿರೋಧಿ ಬಿಜೆಪಿ ಪಕ್ಷದ ಅಧಿಕಾರ ತೊಲಗಿ ಅಂಬೇಡ್ಕರ್ ಪರವಾದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರುವುದೇ ನಮಗೆ ಖುಷಿಯ ವಿಚಾರ, ಬಿಜೆಪಿಯ ಆಡಳಿತ ಮತ್ತು ಕಾಂಗ್ರೆಸ್ ಆಡಳಿತದಲ್ಲಿನ ಬದಲಾವಣೆ ಏನು ಎಂಬ ರೀತಿಯಲ್ಲಿ ಉತ್ತಮ‌ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಉಪಮುಖ್ಯಮಂತ್ರಿ ಸ್ಥಾನ, ಸಚಿವ ಸ್ಥಾನ ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ, ಈ ಹಿಂದೆ ನನಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಅತ್ಯಂತ ‌ನಿಷ್ಠೆಯಿಂದ ಪ್ರಾಮಾಣಿಕವಾಗಿ ಕ್ಷೇತ್ರದ ಜನರಿಗೆ ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ನಿಭಾಯಿಸಿದ್ದೇನೆ . ನಾನು ಅಪೇಕ್ಷೆ ಪಟ್ಟವನಲ್ಲ, ಪಕ್ಷ ನೀಡಿದ ಜವಬ್ದಾರಿಯನ್ನು ಪ್ರಾಮಾಣಿಕತೆ ಯಿಂದ ನಿಭಾಯಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷ ಪ್ರಮುಖರಾದ ಚಂದ್ರಹಾಸ ಕರ್ಕೇರಾ, ಈಶ್ವರ್ ಉಳ್ಳಾಲ್, ರಝಾಕ್ ಕುಕ್ಕಾಜೆ, ಸಂತೋಷ್ ಶೆಟ್ಟಿ, ಹಾಸಿರ್ ಪೆರಿಮಾರ್, ಸಮೀರ್ ಫಜೀರ್, ಅರುಣ್ ಡಿ.ಸೋಜ, ದೇವದಾಸ್ ಭಂಡಾರಿ, ನವಾಝ್ ನರಿಂಗಾನ, ಹುಸೈನ್, ಕುಂಞಿ ಮೋನು, ಮುರಳೀಧರ ಶೆಟ್ಟಿ, ಫಾರೂಕ್ ದೇರಳಕಟ್ಟೆ, ದಿನೇಶ್ ಪೂಜಾರಿ, ಮುಹಮ್ಮದ್ ಮುಕ್ಕಚ್ಚೇರಿ, ಮಲ್ಲಿಕಾ ಪಕ್ಕಳ, ಮಮತಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು