ಡೈಲಿ ವಾರ್ತೆ:21 ಮೇ 2023

ದಕ್ಷಿಣ ಕನ್ನಡ: 21ನೇ ವಯಸ್ಸಿಗೆ ಪೈಲೆಟ್ ಆದ ಹನಿಯಾ ಹನೀಫ್ – ಸವಾಲನ್ನು‌ ಮೆಟ್ಟಿ ನಿಂತು 200 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ಕರಾವಳಿಯ ಹೆಣ್ಣುಮಗಳು!

ಮಂಗಳೂರು;ಕರಾವಳಿಯ ಯುವತಿಯೋರ್ವಳು 21ನೇ ವಯಸ್ಸಿಗೆ ಪೈಲೆಟ್ ಆಗುವ ಮೂಲಕ ಸುದ್ದಿಯಾಗಿದ್ದಾರೆ.

ಮಂಗಳೂರಿನ ಪಾಂಡೇಶ್ವರ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ನಾಝಿಯಾ ದಂಪತಿಯ ಪುತಿಯಾದ ಹನಿಯಾ ಹನೀಫ್ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದು ಅಧಿಕೃತ ಪೈಲಟ್ ಆಗಿದ್ದಾರೆ.

ಹನಿಯಾ 9ನೇ ತರಗತಿವರೆಗೆ ದುಬೈನ ‘ದಿ ಇಂಡಿಯನ್ ಹೈಸ್ಕೂಲ್’ನಲ್ಲಿ ಓದಿದ್ದು. ಆನಂತರ ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣವನ್ನು ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದರು.ಚಿಕ್ಕಂದಿನಿಂದಲೆ ವಿದೇಶಕ್ಕೆ ಹೋಗುತ್ತಿದ್ದ ಕಾರಣ ವಿಮಾನಗಳ ಹಾರಾಟ ಕಂಡು ಪೈಲೆಟ್ ಹಾಗಬೇಕು ಎಂದು ಹನಿಯಾ ದೃಢ ನಿರ್ಧಾರಕ್ಕೆ ಬಂದಿದ್ದರು

ಹನಿಯಾ ಪಿಯು ಬಳಿಕ ಮೈಸೂರಿನ ಒರಿಯಂಟ್ ಫ್ಲೈಟ್ಸ್ ಏವಿಯೇಷನ್ ಅಕಾಡಮಿಯಲ್ಲಿ ಪೈಲಟ್ ತರಬೇತಿಗೆ ಸೇರಿ ಮೂರೂವರೆ ವರ್ಷ ತರಬೇತಿ ಪಡೆದು, ತನ್ನ 21ನೇ ವಯಸ್ಸಿನಲ್ಲಿ ಯಶಸ್ವಿಯಾಗಿ ಕಮರ್ಶಿಯಲ್ ಪೈಲಟ್ ಪರವಾನಿಗೆಯನ್ನು ಹನಿಯಾ ತನ್ನದಾಗಿಸಿಕೊಂಡಿದ್ದಾರೆ.

ಇವರು ಒಟ್ಟು 200 ತಾಸುಗಳ ಕಾಲ ವಿಮಾನ ಹಾರಾಟ ನಡೆಸಿದ ಬಳಿಕ ಫಸ್ಟ್ ಕ್ಯಾಪ್ಟನ್ ಆಗಿದ್ದಾರೆ.
ಈ ಕುರಿತು ಮಾತನಾಡಿದ ಹನಿಯಾ, ಪೈಲೆಟ್ ಹಾಗಬೇಕೆಂದು‌ ನಾನು ದೃಢ ನಿರ್ಧಾರಕ್ಕೆ ಚಿಕ್ಕವಿರುವಾಗ ಬಂದಿದ್ದೆ.ನಾನು ವಿಮಾನದಲ್ಲಿ ದುಬೈಗೆ ಪ್ರಯಾಣ ಮಾಡುತ್ತಿದ್ದ ಕಾರಣ ನಾನು ಪ್ರೇರಿತಳಾದೆ.ಪೈಲೆಟ್ ತರಬೇತಿ ಸುಲಭವಲ್ಲ, ಅದರಲ್ಲೂ ಮಹಿಳೆಯರಿಗಂತೂ ಈ ರಂಗದಲ್ಲಿ ಪ್ರೋತ್ಸಾಹ ನೀಡಲು ಪೋಷಕರು ಬಹಳ ಹಿಂಜರಿಯುತ್ತಾರೆ. ಆದರೆ ನನಗೆ ನನ್ನ ಪೋಷಕರಿಂದ ಸಿಕ್ಕಿದ ಬೆಂಬಲ ಹಾಗೂ ಪ್ರೋತ್ಸಾಹ ನನಗೆ ಮುಂದುವರಿಯಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ‌.

ಹನಿಯಾ ಸಣ್ಣ ವಯಸ್ಸಿನಲ್ಲೇ ನಾನು ಪೈಲಟ್ ಆಗುತ್ತೇನೆ ಎಂದು ಹೇಳುತ್ತಿದ್ದಳು. ಅದಕ್ಕೆ‌ ನಾವು ಬೆಂಬಲಿಸಿದೆವು.ಇದೀಗ ಮಗಳು ಗುರಿಯನ್ನು ಯಶಸ್ವಿಯಾಗಿ ತಲುಪಿರುವುದು ಸಂತಸ ತಂದಿದೆ ಎಂದು ಹನಿಯಾ ತಾಯಿ ನಾಝಿಯಾ ಪ್ರತಿಕ್ರಿಯಿಸಿದ್ದಾರೆ.