ಮಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 13 ವರ್ಷವಾಗುತ್ತಿದೆ.

2010ರ ಮೇ22ರ ಬೆಳಗ್ಗೆ 6.20ಕ್ಕೆ ದುಬಾೖಯಿಂದ ಬಂದ ಏರ್‌ ಇಂಡಿಯಾ ವಿಮಾನ ಲ್ಯಾಂಡಿಂಗ್‌ ವೇಳೆ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ದುರಂತದಲ್ಲಿ ಮಡಿದವರ ಹಲವರ ಕುಟುಂಬಕ್ಕೆ ಈಗಲೂ ಪರಿಹಾರ ಧನ ಸಿಗಲಿಲ್ಲ ಎಂಬುದು ಅಷ್ಟೇ ಬೇಸರದ ಸಂಗತಿ.

8 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದರು. ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ಸ್ಮರಣಾರ್ಥ ನಿರ್ಮಿಸಿದ ಪಾರ್ಕ್‌ನಲ್ಲಿ ಜಿಲ್ಲಾಡಳಿತದಿಂದ ಇಂದು ಬೆಳಗ್ಗೆ 9ಕ್ಕೆ ಮಡಿದವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

ದುರಂತ ಸಂಭವಿಸಿದ್ದಾದರೂ ಹೇಗೆ?
ವಿಮಾನದ ಬ್ಲ್ಯಾಕ್‌ ಬಾಕ್ಸ್‌ನ ವಿಶ್ಲೇಷಣೆಯ ಅನಂತರ ಈ ದುರಂತಕ್ಕೆ ಕಾರಣವೇನೆಂದು ತಿಳಿದು ಬಂತು. ಅದು ಆ ವಿಮಾನದ ಮುಖ್ಯ ಪೈಲಟ್‌ ಕ್ಯಾ|ಗ್ಲುಸಿಕಾ ಅವರು ಎಸಗಿದ ಪ್ರಮಾದ. ಸಹ ಪೈಲಟ್‌ ಕ್ಯಾ| ಅಹ್ಲುವಾಲಿಯಾ ಅವರ ಸಲಹೆ, ಎಚ್ಚರಿಕೆಯನ್ನು ಪರಿಗಣಿಸದೆ ಅವರು ವಿಮಾನವನ್ನು ಇಳಿಸಲು ನಿರ್ಧರಿಸಿದ್ದರು. ರನ್‌ವೇ ಅಂತರದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಅವರಿಂದ ಪ್ರಮಾದವಾಗಿತ್ತು.
ವಿಪರ್ಯಾಸವೆಂದರೆ, ಗ್ಲುಸಿಕಾ ಅವರು ಈ ಹಾದಿ ಯಲ್ಲಿ ಅನೇಕ ಬಾರಿ ವಿಮಾನ ಹಾರಾಟ ನಡೆಸಿದ್ದವರು. 19 ಬಾರಿ ಇಳಿಸಿದ್ದವರು. 10,200 ತಾಸು ವಿಮಾನ ಹಾರಾಟದ ಅನುಭವಿ ಆಗಿದ್ದವರು. ಸತತ ಡ್ನೂಟಿ ನಿರ್ವಹಣೆಯಿಂದ ಅವರು ನಿದ್ದೆಯ ಮಂಪರಿಗೆ ಜಾರಿದ್ದರೆ? ವಿಮಾನ ಇಳಿಯುವ ಪ್ರಕ್ರಿಯೆಯ ಸ್ವಲ್ಪ ಮೊದಲು ಅವರನ್ನು ಎಚ್ಚರ ಗೊಳಿಸಲಾಯಿತು. ವಿಮಾನ ಇಳಿಯುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವಿಧ ಸುರಕ್ಷ ವ್ಯವಸ್ಥೆಗಳು ಜಾಗೃತ ಸ್ಥಿತಿಯಲ್ಲಿ ಇರಲಿಲ್ಲವೇ? ಇಂತಹ ಅನೇ ಕಾನೇಕ ಪ್ರಶ್ನೆಗಳನ್ನು ಈ ದುರಂತ ಹುಟ್ಟು ಹಾಕಿತು.

ಈ ದುರಂತ ಅನೇಕ ಕುಟುಂಬಗಳನ್ನು ಸರ್ವನಾಶ ಮಾಡಿತು. ಗಲ್ಫ್ನಲ್ಲಿ ದುಡಿದು, ಇಲ್ಲಿ ಊರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದವರು ಮಡಿದರು. ಅನೇಕ ಮೃತ ಶರೀರಗಳ ಗುರುತು ಹಚ್ಚಲು ಡಿಎನ್‌ಎ ಪರೀಕ್ಷೆ ಅನಿವಾರ್ಯವಾಯಿತು. ಆ ಬಳಿಕ ಪರಿ ಹಾರದ ಮೊತ್ತವೂ (ವಾರಸುದಾರಿಕೆಗೆ ಸಂಬಂಧಿಸಿ) ಅನೇಕ ಕುಟುಂಬಗಳು ಒಡೆಯಲು ಕಾರಣವಾಯಿತು. ನ್ಯಾಯಾಲಯದ ಮೆಟ್ಟಿಲನ್ನು ಕೆಲವರು ಏರಿದರು. ಇವೆಲ್ಲವೂ ಭೀಕರ ವಿಮಾನ ಸ್ಫೋಟದ ಪಶ್ಚಾತ್‌ ಸ್ಫೋಟಗಳು. ಕಾಲವು ಹಾಗೆಲ್ಲ ಸುಲಭವಾಗಿ ಮರೆಸುವಂತಹ ಸ್ಫೋಟವಿದಲ್ಲ.