ಡೈಲಿ ವಾರ್ತೆ: 26 ಮೇ 2023

ಅಂಗನವಾಡಿ ಕಾರ್ಯಕರ್ತೆಯ ಹತ್ಯೆ, ಆರೋಪಿ ಬಂಧನ

ಮೈಸೂರು:ಹಣಕಾಸಿನ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ, ಅಂಗನವಾಡಿ ಕಾರ್ಯಕರ್ತೆಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಘಟನೆ, ಮೈಸೂರು ಹೊರ ವಲಯದ ಬೆಂಗಳೂರು ಹೆದ್ದಾರಿ ಪಕ್ಕದಲ್ಲಿ ಇರುವ ಸಿದ್ದಲಿಂಗಪುರದಲ್ಲಿ ನಡೆದಿದೆ.

ಬುಧವಾರ ಅಂಗನವಾಡಿ ಕಾರ್ಯಕರ್ತೆಯನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಹತ್ಯೆಯ ಆರೋಪಿಯನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಬುಧವಾರ ಸಂಜೆ ಮೈಸೂರು- ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿ ಇರುವ ಸಿದ್ದಲಿಂಗಪುರ ಗ್ರಾಮದಲ್ಲಿ ಇರುವ ಬೇಕರಿಯೊಂದರಲ್ಲಿ, ಅಂಗನವಾಡಿ ಕಾರ್ಯಕರ್ತೆಯನ್ನು ಕಬ್ಬಿಣದ ಸಲಾಕೆಯಿಂದ ಬರ್ಬರವಾಗಿ ಕೊಲೆ ಮಾಡಿ, ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಕಳೆದ ರಾತ್ರಿ ಹತ್ಯೆಯ ಆರೋಪಿ ಮೋಹನ್ (26) ಅವರನ್ನು ‌ಪೊಲೀಸರು ಬಂಧಿಸಿದ್ದಾರೆ.

ಕೊಲೆಯ ವಿವರ: ಹತ್ಯೆಯಾದ ಅಂಗನವಾಡಿ ಕಾರ್ಯಕರ್ತೆ ಮಮತಾಳನ್ನು ಕಳೆದ ಬುಧವಾರ ಸಂಜೆ ಕೊಲೆ ಮಾಡಿ ಪರಾರಿಯಾಗಿದ್ದ ಮೋಹನ್ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ, ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಕೊಲೆಗೆ ಕಾರಣ ತಿಳಿಸಿದ್ದಾನೆ. ಕಳೆದ ಮೂರು ವರ್ಷಗಳಿಂದ ಸಿದ್ದಲಿಂಪುರದ ಹೆದ್ದಾರಿಯ ಪಕ್ಕದಲ್ಲಿ ಬೇಕರಿ ನಡೆಸುತ್ತಿದ್ದ ಅದೇ ಗ್ರಾಮದ ಮೋಹನ್ ಎಂಬಾತ, ಪಾಂಡವಪುರ ತಾಲೂಕಿನ ಕೆರೆತಣ್ಣೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಮಮತಾಳೊಂದಿಗೆ ಸಂಪರ್ಕ ಹೊಂದಿದ್ದನು. ಆಕೆ ಚೀಟಿ ವ್ಯವಹಾರ ನಡೆಸುತ್ತಿದ್ದು, ಈತನಿಗೆ ಹಣಕಾಸು ಸಹಾಯ ಮಾಡಿದ್ದರು. ಆಕೆ ಈತನೊಂದಿಗೆ ಬೇಕರಿಯಲ್ಲಿಯೇ ಬಂದು ವ್ಯಾಪಾರ ನಡೆಸುತ್ತ ಜೊತೆಯಲ್ಲಿಯೇ ಇರುತ್ತಿದ್ದರು ಎನ್ನಲಾಗಿದೆ.

ಹಣಕಾಸು ವಿಚಾರಕ್ಕೆ ಗಲಾಟೆ:
ಬುಧವಾರ ಸಂಜೆ ಬೇಕರಿಗೆ ಬಂದ ಮಮತಾ ಮೋಹನ್ನೊಂದಿಗೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆಸಿದ್ದಾರೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು, ಬೇಕರಿ ತಿನಿಸುಗಳನ್ನು ಮಾಡಲು ಬಳಸುತ್ತಿದ್ದ ಕಬ್ಬಿಣದ ಸಲಾಕೆಯಿಂದ ಮಮತಾಳ ತಲೆಗೆ ಹೊಡೆದಿದ್ದು, ಸ್ಥಳದಲ್ಲೇ ಮಮತಾ ಮೃತಪಟ್ಟಿದ್ದಾರೆ. ತಕ್ಷಣ ಆರೋಪಿ ಪರಾರಿಯಾಗಿದ್ದು, ಈತನನ್ನು ಕಳೆದ ರಾತ್ರಿ ಮೇಟಗಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.