ಡೈಲಿ ವಾರ್ತೆ: 02 ಜೂನ್ 2023

ಉಳ್ಳಾಲ ಸೋಮೇಶ್ವರ ಬೀಚ್ ನಲ್ಲಿ ಅನೈತಿಕ ಪೊಲೀಸ್ ಗಿರಿ: ಐವರು ವಶಕ್ಕೆ – ಠಾಣೆಗೆ ಬಿಜೆಪಿ, ಹಿಂದೂ ಸಂಘಟನೆ ಮುಂಖಂಡರು ದೌಡು

ಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್‌ನಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಐವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ.

ಓರ್ವ ಅಪ್ರಾಪ್ತ ಸೇರಿದಂತೆ ಒಟ್ಟು ಐದು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ.

ಉಳ್ಳಾಲದ ಬಸ್ತಿಪಡ್ಪು ನಿವಾಸಿ ಯತೀಶ್(48), ಉಚ್ಚಿಲ ನಿವಾಸಿ ಸಚಿನ್(23), ತಲಪಾಡಿ ನಿವಾಸಿ ಮೋಕ್ಷಿತ್, ಸುಹಾನ್(19) ಬಂಧಿತ ಆರೋಪಿಗಳಾಗಿದ್ದು, ಇವರು ಹಿಂದೂ ಸಂಘಟನೆಗೆ ಸೇರಿದವರು ಎಂದು ತಿಳಿದುಬಂದಿದೆ.
ಗಲಭೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನೂ ಕೆಲವು ಆರೋಪಿಗಳನ್ನು ಬಂಧಿಸಬೇಕಿದ್ದು, ಇದಕ್ಕಾಗಿ ಮೂರು ತಂಡಗಳು ಕಾರ್ಯಚರಣೆ ನಡೆಸಿವೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದರು.


ಇನ್ನು ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಉಳ್ಳಾಲ ಪೊಲೀಸ್ ಠಾಣೆಗೆ ಬಿಜೆಪಿ ನಾಯಕ ಸತೀಶ್ ಕುಂಪಲ ಹಾಗೂ ವಿಎಚ್ ಪಿ, ಭಜರಂಗದಳ ಪ್ರಮುಖರು ಭೇಟಿ ನೀಡಿದ್ದು, ಹಲವು ಅಮಾಯಕ ಹಿಂದೂ ಯುವಕರನ್ನು ಬಂಧಿಸಲಾಗಿದೆ. ತಕ್ಷಣ ಅಮಾಯಕರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಕೇಸ್ ನಲ್ಲಿ ಇಲ್ಲದಿದ್ದರೆ ಬಿಡುಗಡೆ ಮಾಡುವುದಾಗಿ ಕಮಿಷನರ್ ಕುಲದೀಪ್ ಜೈನ್ ಭರವಸೆ ನೀಡಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸತೀಶ್ ಕುಂಪಲ, ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ. ಕಾಲೇಜಿನ ಅನ್ಯಕೋಮಿನ ವಿದ್ಯಾರ್ಥಿಗಳು ಸೋಮೇಶ್ವರ ಬೀಚ್ ಗೆ ಬಂದಿದ್ದಾರೆ. ಪರಮಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ. ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಕಂಡು ಆಕ್ರೋಶ ಸಹಜ. ಏನೇ ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಲಿ. ಇಂತಹ ಘಟನೆಗಳಿಗೆ ಆಸ್ಪದ ನೀಡುವುದು ಬೇಡ. ಅಮಾಯಕರ ಬಂಧನ ಸರಿಯಲ್ಲ ಎಂದರು.

ಅಮಾಯಕರನ್ನ ಬಿಡುತ್ತೇವೆ ಎಂದು ಹೇಳಿದ್ದಾರೆ. ಯುವಕರು ನಮ್ಮ ಕಾರ್ಯಕರ್ತರು ಎನ್ನುವ ಪ್ರಶ್ನೆ ಅಲ್ಲ. ಅವರ ಕುಟುಂಬದವರು ಬಂದು ಹೇಳಿದಾಗ ನಾವು ಠಾಣೆಗೆ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಪ್ರಕರಣ ಗಂಭೀರತೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲೇ ಕಮಿಷನರ್ ಕುಲದೀಪ್ ಜೈನ್ ಮೊಕ್ಕಾಂ ಹೂಡಿದ್ದಾರೆ.

ಪ್ರಕರಣದ ಹಿನ್ನೆಲೆ
ಕರಾವಳಿ ನಗರ ಮಂಗಳೂರಿನ ಸೋಮೇಶ್ವರ ಬೀಚ್ನಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿತ್ತು, ಕೇರಳ ಮೂಲದ 6 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದರು. ಇದೇ ವೇಳೆ ತಂಡವೊಂದು ಹಲ್ಲೆ ನಡೆಸಿತ್ತು.

ಜಾಫರ್ ಶರೀಫ್, ಮುಜೀಬ್ ಮತ್ತು ಆಶೀಕ್ ಮೇಲೆ ಹಲ್ಲೆ ಮಾಡಲಾಗಿತ್ತು. ಮೂವರು ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳ ಮೇಲೆ ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತರು ದಾಳಿ ಮಾಡಿದ್ದರು. ಮೂವರು ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಹಿಂಬಾಲಿಸಿತ್ತು, ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದ ಕಾರಣಕ್ಕೆ ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ಮೆರೆದಿದ್ದರು.