ಡೈಲಿ ವಾರ್ತೆ: 05 ಜೂನ್ 2023

ದಕ್ಷಿಣ ಕನ್ನಡ: ಮರದ ದಿಮ್ಮಿ ಮೈಮೇಲೆ ಬಿದ್ದು ಕಾಂಗ್ರೆಸ್ ಮುಖಂಡ ಮೃತ್ಯು!

ಪುತ್ತೂರು:ವಾಹನಕ್ಕೆ ಮರದ ದಿಮ್ಮಿ ಲೋಡ್ ಮಾಡುತ್ತಿರುವಾಗ ಮರದ ದಿಮ್ಮಿ ಮೈ ಮೇಲೆ ಬಿದ್ದು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮೃತಪಟ್ಟಿದ್ದಾರೆ‌.

ಪಡುವನ್ನೂರು ಗ್ರಾಮದ ಸುಳ್ಯಪದವು ಬಟ್ಟ್ಯಂಗಳ ನಿವಾಸಿ ಗೋಪಾಲಕೃಷ್ಣ ಮೃತಪಟ್ಟ ವ್ಯಕ್ತಿ. ಇವರು ಸುಳ್ಯಪದವು ವಲುಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಗೋಪಾಲಕೃಷ್ಣ ತನ್ನ ಮನೆ ಸಮೀಪವಿರುವ ಮಾವಿನ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಟಿಪ್ಪರ್ ವಾಹನಕ್ಕೆ ಲೋಡ್ ಮಾಡುತ್ತಿದ್ದರು. ಟಿಪ್ಪರ್ ವಾಹನದ ಹಿಂದಿನ ಬಾಗಿಲನ್ನು ಸರಿಪಡಿಸುವ ಸಂದರ್ಭದಲ್ಲಿ ಮರದ ದಿಮ್ಮಿ ಹಿಂದಕ್ಕೆ ಬಂದು ಮೈಮೇಲೆ ಬಿದ್ದಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಗೋಪಾಲಕೃಷ್ಣ ಅವರು ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದು ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ಕೃಷಿಕರಾಗಿ ಕೂಡ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.
ಮೃತರು ತಾಯಿ, ಪತ್ನಿ, ಮೂವರು ಮಕ್ಕಳನ್ನು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ ಎನ್ನಲಾಗಿದೆ.