ಡೈಲಿ ವಾರ್ತೆ:06 ಜೂನ್ 2023

ಕುಂದಾಪುರ: ಕಾಡು ಬಿಟ್ಟು ನಾಡಿಗೆ ಬಂದ ಕಾಡು ಕೋಣ

ಈ ಬಾರಿಯ ಬೇಸಿಗೆ ಎಷ್ಟು ಭೀಕರವಾಗಿದೆಯೆಂದರೆ, ಮನುಷ್ಯರು ಮಾತ್ರವಲ್ಲದೆ ಕಾಡುಪ್ರಾಣಿಗಳೂ ಬಿಸಿಲ ಬೇಗೆ ಮತ್ತು ನೀರಿನ ಕೊರತೆಯಿಂದ ಹೈರಾಣಾಗಿವೆ! ಅವಿಭಜಿತ ಕುಂದಾಪುರ ತಾಲೂಕಿನ ಸಣ್ಣಪುಟ್ಟ ಕೆರೆ – ಕೊಳ್ಳಗಳು, ನೀರ ಕಾಲುವೆ, ತೋಡುಗಳು ಬರಿದಾಗಿವೆ. ಕಾಡುಗಳ ಮಧ್ಯೆ ಹರಿಯುತ್ತಿದ್ದ ನೀರ ಝರಿಗಳು ಬತ್ತಿ ಕಾಡು ಪ್ರಾಣಿಗಳು ಕಂಗಲಾಗಿವೆ. ಮೊದಲೆಲ್ಲಾ ಅವುಗಳು ರಾತ್ರಿ ವೇಳೆಯಲ್ಲಿ ಕಾಡಂಚಿನ ನದಿ ಕೊಳ್ಳಗಳಿಗೆ ಬಂದು ನೀರು ಕುಡಿದು ಹೋಗುತ್ತಿದ್ದವು. ಈಗ ಎಲ್ಲೆಡೆಯೂ ನೀರ ವರತೆ ಬತ್ತಿದ್ದರಿಂದ ಅವುಗಳು ನೀರು ಅರಸಿಕೊಂಡು ಗ್ರಾಮಗಳಿಗೆ ಲಗ್ಗೆಯಿಡುತ್ತಿವೆ.

ಬೈಂದೂರು ಅರಣ್ಯ ವಲಯದ ಸಿದ್ಧಾಪುರದ ಪಡ್ಲಾಡಿ ಪ್ರದೇಶದಲ್ಲಿರುವ ಚಕ್ರ ನದಿಯು ಬತ್ತಿದ್ದರಿಂದ ನೀರು ಹುಡುಕಿಕೊಂಡು ಕಾಡುಕೋಣಗಳು ಹಗಲು ವೇಳೆಯಲ್ಲೇ ಸ್ವಚ್ಛಚಂದವಾಗಿ ಅಲೆಯುವುದು ಕಂಡುಬದಿದೆ. ಇದರಿಂದ ಸಾರ್ವಜನಿಕರು, ಶಾಲೆಗೆ ಹೋಗುವ ಮಕ್ಕಳು ಭಯಗೊಂಡಿದ್ದಾರೆ. ಇನ್ನೇನು ಮುಂಗಾರು ಆಗಮನವಾಗುತ್ತಿದ್ದು ಕಾಡಂಚಿನ ಹೊಲ ಗದ್ದೆಗಳಿಗೆ ಕೃಷಿ ಕಾರ್ಯಗಳಿಗಾಗಿ ಹೋಗಲು ರೈತರು ಭಯಪಡುತ್ತಿದ್ದಾರೆ. ಹೀಗೆ ಅಲ್ಲಲ್ಲಿ ಜಿಂಕೆ, ಕಡವೆ, ಚಿರತೆಗಳೂ ಅಡ್ಡಾಡುವ ಬಗ್ಗೆ ಜನರು ಮಾಹಿತಿ ನೀಡಿದ್ದಾರೆ. ತೆಕ್ಕಟ್ಟೆಯ ಮಲ್ಯಾಡಿ ಪ್ರದೇಶದಲ್ಲಿ ಚಿರತೆ ದರ್ಶನವಾಗಿ ಜನರು ಕಂಗಲಾಗಿದ್ದಾರೆ. ಈ ಎಲ್ಲಾ ಘಟನೆಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ, ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಅರಣ್ಯ ಇಲಾಖೆಯೇ ಕಾಡುಗಳಲ್ಲಿ ಅಲ್ಲಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ನಾಗರಹೊಳೆ ಅರಣ್ಯ ವಲಯದಲ್ಲಿ ಇಲಾಖೆ ಇಂತಹ ಕೆಲಸಗಳನ್ನು ಮಾಡಿದೆ.

ಕುಂದಾಪುರ ಪರಿಸರಸಲ್ಲಿ ಈ ಬಾರಿ ಬೇಸಿಗೆ ಮಳೆ ಸಾಕಷ್ಟು ಬಾರದಿರುವುದರಿಂದ ಈ ಬಗೆಯ ನೀರಿನ ಕೊರತೆ ಉಂಟಾಗಿದೆ ಎನ್ನಲಾಗಿದೆ. ನೀರನ್ನು ಅರಸಿ ಜನವಸತಿ ಪ್ರದೇಶಗಳಲ್ಲಿ ಹಗಲಿನಲ್ಲೇ ಓಡಾಡತೊಡಗಿದ ಕಾಡು ಪ್ರಾಣಿಗಳ ಬಗ್ಗೆ ಅರಣ್ಯ ಇಲಾಖೆ ನಿಗಾ ವಹಿಸಿ ಅವುಗಳಿಗೆ ಕಾಡಿನಲ್ಲೇ ನೀರು ಸಿಗುವಂತೆ ಮಾಡಬೇಕಾಗಿದೆ. ನೀರಿಗಾಗಿ ಬಂದ ಕಾಡುಕೋಣ, ಚಿರತೆ ಇತ್ಯಾದಿ ಪ್ರಾಣಿಗಳು ಬೇರೆ ಅನಾಹುತಗಳನ್ನು ಮಾಡುವ ಮೊದಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ.