ಡೈಲಿ ವಾರ್ತೆ:08 ಜೂನ್ 2023
ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಆಂಬುಲೆನ್ಸ್ ಗೆ ಬೆಂಕಿ – ತಾಯಿ, ಮಗು ಸೇರಿ ಮೂವರ ಸಜೀವ ದಹನ
ಗುವಾಹತಿ: ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮುಂದುವರಿದಿದ್ದು, ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಏಳು ವರ್ಷದ ಗಾಯಾಳು ಬಾಲಕ, ಆತನ ತಾಯಿ ಹಾಗೂ ಆ್ಯಂಬುಲೆನ್ಸ್‍ನಲ್ಲಿದ್ದ ಮತ್ತೊಬ್ಬ ಮಹಿಳೆ ಸಜೀವ ದಹನವಾಗಿದ್ದಾರೆ.
ಇಂಫಾಲದ ಐರೋಸೆಂಬ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಎನ್ನಲಾಗಿದ್ದು, ಇದುವರೆಗೂ ಈ ದಾಳಿ ಘಟನೆ ಬಗ್ಗೆ ಸರ್ಕಾರ ಮೌನವಾಗಿದೆ ಎಂದು ಮೂಲಗಳು ಹೇಳಿವೆ. ನತದೃಷ್ಟ ಬಾಲಕನ ಪೋಷಕರು ಕುಕಿ- ಮೀಟಿ ಜನಾಂಗಗಳಿಗೆ ಸೇರಿದವರು ಎನ್ನಲಾಗಿದೆ.
ತಾಂಗ್‍ಸಿಂಗ್ ಹಂಗ್ಸಿಂಗ್, ಆತನ ತಾಯಿ ಮೀಟಿ ಜನಾಂಗಕ್ಕೆ ಸೇರಿದ ಮೀನಾ ಹಾಗೂ ಅವರ ನೆರೆಯವರಾದ ಲಿಡಿಯಾ ಲೊರೆಂಬಮ್ ಅವರು ಇದ್ದ ಆ್ಯಂಬುಲೆನ್ಸ್, ಅಸ್ಸಾಂ ರೈಫಲ್ಸ್ ಬೆಂಗಾವಲಿನಲ್ಲಿ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ತೆರಳುತ್ತಿತ್ತು. ಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರ ನೇತೃತ್ವದ ಮಣಿಪುರ ಪೊಲೀಸ್ ತಂಡ ಕೂಡಾ ಜತೆಗೆ ಇತ್ತು ಎನ್ನಲಾಗಿದೆ.
ಗುಂಪು ದಾಳಿ ಮಾಡಿ, ಬೆಂಕಿ ಹಚ್ಚುತ್ತಿದ್ದಾಗ ಮೂವರನ್ನು ಆ್ಯಂಬುಲೆನ್ಸ್‍ನಲ್ಲೇ ಬಿಟ್ಟು ಬೆಂಗಾವಲು ನೀಡುತ್ತಿದ್ದ ಪೊಲೀಸರು ಹಾಗೂ ಆ್ಯಂಬುಲೆನ್ಸ್ ಚಾಲಕ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಮೀಟಿ ಸಮುದಾಯಕ್ಕೆ ಸೇರಿದ ಗಾಯಾಳು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಬಗ್ಗೆ ಕುಕಿ ಸಮುದಾಯಕ್ಕೆ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಕೇಂದ್ರಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ವಿವರಿಸಲಾಗಿದೆ.
ಸಂತ್ರಸ್ತರು ಕಂಗ್‍ಪೋಕ್ಪಿ ಜಿಲ್ಲೆಯ ಕಂಗ್‍ಚೂಪ್ ಗ್ರಾಮದವರರಾಗಿದ್ದು, ಜನಾಂಗೀಯ ಸಂಘರ್ಷದಿಂದ ನಿರಾಶ್ರಿತರಾಗಿ ಅಸ್ಸಾಂ ರೈಫಲ್ಸ್ ಶಿಬಿರದ ಬಳಿ ಮೇ 4ರಿಂದ ಆಸರೆ ಪಡೆದಿದ್ದರು ಎಂದು ತಿಳಿದು ಬಂದಿದೆ.