ಡೈಲಿ ವಾರ್ತೆ: 08 ಜೂನ್ 2023
ಅನೈತಿಕ ಪೊಲೀಸ್ಗಿರಿ ತಡೆಯಲು ರಾಜ್ಯ ಗೃಹ ಇಲಾಖೆ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಸ್ವಾಗತಾರ್ಹ : ಇಬ್ರಾಹಿಂ ಕೈಲಾರ್
ಬಂಟ್ವಾಳ : ಅನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲು ರಾಜ್ಯ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಮುಂದಾಗಿರುವುದು ಸ್ವಾಗತಾರ್ಹ ಎಂದು ಬಂಟ್ವಾಳ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೈಲಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಇತ್ತೀಚಿನ ದಿನಗಳಲ್ಲಿ ದ.ಕ.ಜಿಲ್ಲೆಯನ್ನು ಕೇಂದ್ರೀಕರಿಸಿ ಕೋಮು ಧ್ರುವೀಕರಣ ಕಾರ್ಯಗಳು ಅತಿಯಾಗಿದ್ದು ಮತೀಯ ಉದ್ವಿಗ್ನತೆ, ಗಲಭೆ, ಮತೀಯ ದ್ವೇಷಿತ ಹತ್ಯೆ, ಭಯಗ್ರಸ್ತ ವಾತಾವರಣ, ಅಶಾಂತಿ ಪ್ರಮುಖವಾಗಿ ಅನೈತಿಕ ಪೊಲೀಸ್ ಗಿರಿ ನಿವಾರಣೆಗೆ ಅಗತ್ಯ ಕಾನೂನಾತ್ಮಕ ನಡೆಯನ್ನು ಅನುಷ್ಟಾನಿಸಲು ಮುಂದಾಗಿರುವುದು ಶ್ಲಾಘನೀಯ.
ಆದರೆ ಇಂತಹ ಚಟುವಟಿಕೆಗಳಲ್ಲಿ ಹೆಚ್ಚಾಗಿ ಅಮಾಯಕ ಹಿಂದುಳಿದ ವರ್ಗಗಳ ಯುವಕರು ಬಲಿಯಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಯುವಕರ ಮನ ಪರಿವರ್ತನೆ ಮತ್ತು ಜಾಗೃತಿ ಮೂಡಿಸುವ ಕೆಲಸದಲ್ಲಿ ಹಿಂದುಳಿದ ವರ್ಗದ ಪ್ರಮುಖರು, ಸಮಾನ ಮನಸ್ಕ ಮುಖಂಡರು, ಧುರೀಣರು, ನಾಯಕರು ಮುತುವರ್ಜಿವಹಿಸಿ ಕಾರ್ಯ ಪ್ರವರ್ಥರಾಗಬೇಕಾಗಿದೆ.
ಈ ಭಾಗದಲ್ಲಿ ಭಯದ ವಾತಾವರಣವನ್ನು ಹೋಗಲಾಡಿಸಿ ಜನರ ಪ್ರೀತಿ, ವಿಶ್ವಾಸ, ಸಹೋದರತೆ, ಸಹಬಾಳ್ವೆಯ ಬದುಕಿಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಕೋಮು ಭಾವನೆಯನ್ನು ಕೆರಳಿಸುವುದನ್ನೇ ಕಾಯಕವನ್ನಾಗಿಸಿ ಶಾಂತಿ ಸೌಹಾರ್ದತೆ, ಸಹಬಾಳ್ವೆ ಯನ್ನು ಕೆಡಿಸುವುದರ ಜೊತೆಗೆ ಅಶಾಂತಿಯ ವಾತಾವರಣ ಸೃಷ್ಟಿಸುವ ಮತ್ತು ಅದಕ್ಕೆ ಪ್ರೇರಣೆ ನೀಡುತ್ತಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಇಬ್ರಾಹಿಂ ಕೈಲಾರ್ ಆಗ್ರಹಿಸಿದ್ದಾರೆ.