ಡೈಲಿ ವಾರ್ತೆ:09 ಜೂನ್ 2023

ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಎಇಇ

ಮಡಿಕೇರಿ: 49 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಸೆಸ್ಕ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಪ್ರತಾಪ್ ಎಂಬುವವರು ಕೊಡಗಿನ ಕುಶಾಲನಗರದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ತೆರೆಯಲು ಅರ್ಜಿ ಸಲ್ಲಿಸಿದ್ದರು. 49 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ನೀಡಲು ಅಶೋಕ್ 5 ಲಕ್ಷ ರೂ. ಲಂಚ ಕೇಳಿದ್ದರು. ಇದರ ಮೊದಲ ಕಂತಿನ ಹಣವಾಗಿ 2 ಲಕ್ಷ ರೂ. ಪಡೆಯುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಯಿತು ಎಂದು ಲೋಕಾಯುಕ್ತ ಮೈಸೂರು ವಿಭಾಗದ ಎಸ್‌ಪಿ ಸುರೇಶ್ ಬಾಬು ತಿಳಿಸಿದರು.

ಲೋಕಾಯುಕ್ತ ಮಡಿಕೇರಿಯ ಡಿವೈಎಸ್‌ಪಿ ಪವನ್ ಕುಮಾರ್ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ಮಂಜುನಾಥ ಕಾರ್ಯಾಚರಣೆ ತಂಡದಲ್ಲಿದ್ದರು.