ಡೈಲಿ ವಾರ್ತೆ: 16 ಜೂನ್ 2023

ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿರುವ ರಾಜ್ಯ ಸರಕಾರದ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಟ ಎಚ್ಚರಿಕೆ: ಡಾ.ಪ್ರಭಾಕರ ಭಟ್ ಕಲ್ಲಡ್ಕ

ಬಂಟ್ವಾಳ : ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿ ರುವ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ಶುಕ್ರವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ತಂದಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿ ಮೋಸ, ವಂಚನೆಯ, ಬಲವಂತದ ಮತಾಂತರಕ್ಕೆ ಅವಕಾಶವಿರಲಿಲ್ಲ, ಆದರೆ ಸ್ವ ಇಚ್ಛೆಯಿಂದ ಜಿಲ್ಲಾಧಿಕಾರಿಯವರಿಗೆ ಅರ್ಜಿ ಹಾಕಿ ಸ್ಪಷ್ಟ ಕಾರಣ ನೀಡಿ ಮತಾಂತರವಾಗುವುದಕ್ಕೆ ಅಡ್ಡಿ ಇರಲಿಲ್ಲ ಎಂದು ತಿಳಿಸಿದರು.

ಮತಾಂತರ ಕದ್ದುಮುಚ್ಚಿ ನಡೆಯಬಾರದು ಎನ್ನುವುದೂ ಸ್ಪಷ್ಟವಾಗಿತ್ತು, ಮತಾಂತರಕ್ಕೂ ಕಾನೂನಿನ ನಿಬಂಧನೆಗಳನ್ನೂ‌ ನೀಡಲಾಗಿತ್ತು, ಆದರೆ ಈಗಿನ ಸರ್ಕಾರ ಯಾರನ್ನು ಓಲೈಸಲು ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದ ಡಾ. ಭಟ್, ಸರ್ಕಾರಗಳು ಬದಲಾದ ಹಾಗೆ ಹಿಂದಿನದು ಸರಿ ಇಲ್ಲವಾದರೆ ಬದಲಿಸುವುದು ಸಹಜ, ಅದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇದೆ, ಆದರೆ ಹಿಂದಿನ ಸರ್ಕಾರದ ಯಾವುದೇ ಕ್ರಮಗಳು ಕೂಡ ಸರಿ ಇಲ್ಲ ಎನ್ನುವ ಈಗಿನ ಕಾಂಗ್ರೆಸ್ ಸರ್ಕಾರದ ಧೋರಣೆ ಸರಿ ಅಲ್ಲ ಎಂದರು.

ಹಿಂದೂ ಸಮಾಜ ಎಲ್ಲವನ್ನು ಸ್ವೀಕರಿಸುವ ಮತ್ತು ಒಪ್ಪಿಕೊಳ್ಳುವ ಸಮಾಜವಾಗಿದೆ. ಅವರವರ ಪದ್ದತಿಗನುಗುಣವಾಗಿ ನಡೆದುಕೊಳ್ಳುವುದಕ್ಕೆ ಯಾರು ಅಡ್ಡಿಪಡಿಸುವುದಾಗಲಿ, ವಿರೋಧವು ಇಲ್ಲ. ಆದರೆ ಮನೆ, ಮನಸ್ಸು ಒಡೆಯುವ ಕಾರ್ಯ ಅಗಬಾರದು ಎಂದರು.