ಡೈಲಿ ವಾರ್ತೆ:16 ಜೂನ್ 2023
ಜೂನ್ 17 ರಂದು ಬಂಟ್ವಾಳ ರೋಟರಿ ಕ್ಲಬ್ ಗೆ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ ಬೇಟಿ
ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್ ಗೆ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ ಬೇಟಿ ಕಾರ್ಯಕ್ರಮ ಜೂನ್ 17 ರಂದು ಬಂಟ್ವಾಳ ರೋಟರಿ ಭವನದಲ್ಲಿ ನಡೆಯಲಿದೆ ಎಂದು ರೋಟರಿ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯ ಅತಿಥಿಗಳಾಗಿ ಝೋನ್ 4 ರ ಅಸಿಸ್ಟೆಂಟ್ ಗವರ್ನರ್ ಮೇಜರ್ ಡೋನರ್ ಮಂಜುನಾಥ್ ಆಚಾರ್ಯ, ಝೋನ್ 4 ರ ವಲಯ ಸೇನಾನಿ ಮಹಮ್ಮದ್ ವಳವೂರು ಅವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿ ಭಾನು ಶಂಕರ್ , ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ, ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.
*ಬಂಟ್ವಾಳ ರೋಟರಿ ಕ್ಲಬ್ ನ ಸಾಧನೆ.*
54 ವರ್ಷಗಳ ಇತಿಹಾಸವುಳ್ಳ ಬಂಟ್ವಾಳ ರೋಟರಿ ಕ್ಲಬ್ ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದೆ. ಬಂಟ್ವಾಳ ರೋಟರಿ ಕ್ಲಬ್ಬಿನ 53 ವರ್ಷದ ಸುದೀರ್ಘ ಅವಧಿಯಲ್ಲಿ ಮೊದಲ ಬಾರಿ ಬಂಟ್ವಾಳ ರೋಟರಿ ಕ್ಲಬ್‌ನ ಸದಸ್ಯರಾದ ಮೇಜರ್ ಡೋನರ್ ಎನ್. ಪ್ರಕಾಶ್ ಕಾರಂತ್ ಅವರು ರೋಟರಿ ಜಿಲ್ಲೆ 3181ನ 2022-23ರ ಸಾಲಿನ ಜಿಲ್ಲಾ ಗವರ್ನರ್ ಆಗಿ ಬಂಟ್ವಾಳ ರೋಟರಿ ಕ್ಲಬ್‌ಗೆ ಹೆಮ್ಮೆ ಮತ್ತು ಗೌರವವನ್ನು ತಂದು ಕೊಟ್ಟಿದ್ದಾರೆ. ಬಂಟ್ವಾಳ ರೋಟರಿ ಕ್ಲಬ್‌ನ ಸದಸ್ಯರಾದ ಮೇಜರ್ ಡೋನರ್ ಮಂಜುನಾಥ ಆಚಾರ್ಯ ಅವರು 3181ನ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಹಾಗೂ ಮಹಮ್ಮದ್ ವಳವೂರ್ ಅವರು 3I8I ನ ವಲಯ ಸೇನಾನಿ ಆಗಿರುವುದು ಹೆಮ್ಮೆಯ ಸಂಗತಿ ಎಂದು ರೋಟರಿ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ತಿಳಿಸಿದರು.
ಬಂಟ್ವಾಳ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷರಾದ ಅಶ್ವಿನ್ ಕುಮಾರ್ ರೈ ಯವರ ನೇತೃತ್ವದಲ್ಲಿ 110 ಮನೆಗಳಿಗೆ ವಿದ್ಯುತ್ ದೀಪ ಹಾಗೂ ಸೋಲಾರ್ ದೀಪಗಳ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರವರ ನೇತೃತ್ವದಲ್ಲಿ ಕೊರಗ ಜನಾಂಗದ ಅಲೆಮಾರಿ ಕುಟುಂಬಗಳಿಗೆ ಉಚಿತವಾಗಿ ಮನೆ ಕಟ್ಟಿಸಿ ಕೊಡಲಾಗಿದೆ. 2022-23ನೇ ವರ್ಷದ ಈ ಅವಧಿಯಲ್ಲಿ ಬಂಟ್ವಾಳ ರೋಟರಿ ಕ್ಲಬ್‌ನಿಂದ ಸುಮಾರು 206 ಸೇವಾ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಈ ಸಲ ಬಂಟ್ವಾಳ ರೋಟರಿ ಕ್ಲಬ್‌ನ ಹೆಮ್ಮೆಯ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರ ಯೋಜನೆಗಳಾದ ಜಲಸಿರಿ, ವನಸಿರಿ, ಆರೋಗ್ಯಸಿರಿ ಹಾಗೂ ವಿದ್ಯಾಸಿರಿ ಅಡಿಯಲ್ಲಿ ಬಂಟ್ವಾಳ ರೋಟರಿ ಕ್ಲಬ್‌ನಿಂದ ಉತ್ತಮ ಕಾರ್ಯಕ್ರಮ ಗಳನ್ನು ಮಾಡಲಾಗಿದೆ. ಬಂಟ್ವಾಳ ರೋಟರಿ ಕ್ಲಬ್‌ನ ಅಧೀನದಲ್ಲಿರುವ 14 ಇಂಟರಾಕ್ಟ್ ಕ್ಲಬ್, 2 ರೋಟರಾಕ್ಟ್ ಕ್ಲಬ್ ಹಾಗೂ 1 ರೋಟರಿ ಗ್ರಾಮೀಣ ದಳ ಬಂಟ್ವಾಳ ರೋಟರಿ ಕ್ಲಬ್‌ನ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಲಾಗುತ್ತಿದೆ.
ಬಂಟ್ವಾಳ ರೋಟರಿ ಕ್ಲಬ್ ನಿಂದ ಜಲಸಿರಿ ಯೋಜನೆಯಡಿಯಲ್ಲಿ ನೀರು ಇಂಗಿಸುವ ಗುಂಡಿ ಹಾಗೂ ಮಳೆ ಕೊಯ್ಲಿನ ಶೇಖರಣೆ ವ್ಯವಸ್ಥೆ ಮಾಡಲಾಗಿದೆ.ಸುಮಾರು 15 ಶಾಲೆಗಳಿಗೆ ಉಚಿತವಾಗಿ ಕುಡಿಯುವ ನೀರಿನ ಕುಕರಣ ಘಟಕವನ್ನು ನೀಡಲಾಗಿದೆ.
ವನ ಸಿರಿ ಯೋಜನೆಯಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಹಕಾರದೊಂದಿಗೆ ಬಂಟ್ವಾಳ ರೋಟರಿ ಕ್ಲಬ್ ಸೇರಿ ಸುಮಾರು 2,000 ಗಿಡಗಳನ್ನು ಆಕ ಶಾಲಾ ವಠಾರದಲ್ಲಿ ನೆಟ್ಟು ‘ರೋಟರಿ ವನ’ ಸ್ಥಾಪಿಸಲಾಗಿದೆ.
ಬಂಟ್ವಾಳ ರೋಟರಿ ಕ್ಲಬ್‌ನ ಆರೋಗ್ಯ ಸಿಟಿ ಯೋಜನೆಯಡಿ ಯಲ್ಲಿ ಸುಮಾರು 150 ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ನಡೆಸಿ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಸುಮಾರು 200 ಜನರಿಗೆ ದ.ಕ ಜಿಲ್ಲಾ ಆಸ್ಪತ್ರೆ, ವೆನ್ಲಾಕ್ ಇದರ ಸಹಯೋಗ ದೊಂದಿಗೆ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ, ನೇತ್ರಾಧಿಕಾರಿ ಹಾಗೂ ಬಂಟ್ವಾಳ ರೋಟರಿ ಕ್ಲಬ್‌ನ ಸದಸ್ಯರಾದ ಶಾಂತರಾಜ್ ಅವರ ನೇತೃತ್ವದಲ್ಲಿ ಸರಕಾರಿ ಶಾಲೆಯ ಸುಮಾರು 5000 ವಿದ್ಯಾರ್ಥಿಗಳಿಗೆ ಉಚಿತ ನೇತ್ರ ಪರೀಕ್ಷೆ ಮಾಡಿ ಅವಶ್ಯಕತೆಯಿರುವ ಮಕ್ಕಳಿಗೆ ಉಚಿತ ಕನ್ನಡಕವನ್ನು ವಿತರಿಸಲಾಗಿದೆ.
ಬಂಟ್ವಾಳ ರೋಟರಿ ಕ್ಲಬ್ ಅನೇಕ ಅಸಹಾಯಕ ಬಡರೋಗಿಗಳಿಗೆ ವಿಲ್ ಚೇರ್ ವಾಟರ್ ಬೆಡ್ ಹಾಗೂ ಅಂಗವಿಕಲರಿಗೆ ಮೂರು ಚಕ್ರದ ಸೈಕಲ್ ವಿತರಿಸಲಾಗಿದೆ. ಆಸಕ್ತ ಬಡಜನರಿಗೆ ಮನೆಕಟ್ಟಲು ಸಹಾಯಧನ ನೀಡಲಾಗಿದೆ.
ವಿದ್ಯಾಸಿರಿ ಯೋಜನೆಯಡಿಯಲ್ಲಿ ಅನೇಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ಬಂಟ್ವಾಳ ರೋಟರಿ ಕ್ಲಬ್‌ನಿಂದ ವಿತರಿಸಲಾಗಿದೆ. ಎಲ್ಲಾ 16 ಇಂಟರಾಕ್ಟ್, ರೋಟರಾಕ್ ಸಂಸ್ಥೆಗಳ ಹತ್ತನೆಯ ಮತ್ತು ಪದವಿ ಪೂರ್ವ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಧನ ನೀಡಿ ಗೌರವಿಸಲಾಗಿದೆ. ಪರೀಕ್ಷೆ ಎದುರಿಸುವ ಬಗ್ಗೆ ಮತ್ತು ಕೆರಿಯರ್ ಗೈಡೆನ್ಸ್‌ನ ಬಗ್ಗೆ ತರಬೇತಿ ಕಾರ್ಯಗಾರ ನಡೆಸಿಕೊಡಲಾಗಿದೆ. ಬಂಟ್ವಾಳ ರೋಟರಿ ಕ್ಲಬ್‌ನಿಂದ ತೀರಾ ಗ್ರಾಮೀಣ ಪ್ರದೇಶದ 2 ಸರಕಾರಿ ಶಾಲೆಗಳಿಗೆ ಉಚಿತ ಕಂಪ್ಯೂಟರ್ ನೀಡಲಾಗಿದೆ. ಜಿಲ್ಲಾ ಕ್ಲಬ್ ನ ಅನುದಾನದ ಸಹಕಾರ ದಿಂದ ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಗೆ ಸೈನ್ಸ್ ಲ್ಯಾಬ್ ಹಾಗೂ ಪೆರ್ನೆ ಶ್ರೀ ರಾಮ ಚಂದ್ರ ಪದವಿ ಪೂರ್ವ ಕಾಲೇಜಿಗೆ ಸುಮಾರು ರೂ. 2,75,000/- ವೆಚ್ಚದಲ್ಲಿ ಗ್ರಂಥಾಲಯಕ್ಕೆ ಬೇಕಾದ ಪೀಠೋಪಕರಣವನ್ನು ಒದಗಿಸಲಾಗಿದೆ.
ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತರ ಸಹಾಯದೊಂದಿಗೆ ಬಂಟ್ವಾಳ ತಾಲೂಕಿನ ನರಿಕೊಂಬು ಎಂಬಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿಕೊಡಲಾಗಿದೆ.
ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆಯವರ ಅವಿರತ ಶ್ರಮದ ಫಲವಾಗಿ ಈ ವರ್ಷ ಬಂಟ್ವಾಳ ತಾಲೂಕಿಗೆ ಅವಶ್ಯವಿರುವ ರೋಟರಿ ಬ್ಲಡ್ ಬ್ಯಾಂಕ್‌ನ್ನು ಗ್ಲೋಬಲ್ ಗ್ರಾಂಟ್‌ನಿಂದ ಸಿಗುವಂತೆ ಮಾಡಿದ್ದು ಅದನ್ನು ಮುಂದಿನ ದಿನದಲ್ಲಿ ಉದ್ಘಾಟನೆಗೊಳಿಸಲಿದ್ದೇವೆ.
ಬಂಟ್ವಾಳ ರೋಟರಿ ಕ್ಲಬ್‌ನ ಸರ್ವ ಸದಸ್ಯರ ಸಹಾಯ, ಮಾರ್ಗದರ್ಶನ ದೊಂದಿಗೆ ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡಿದ ಫಲವಾಗಿ ಮಂಗಳೂರಿನಲ್ಲಿ ನಡೆದ ರೋಟರಿ ಜಿಲ್ಲಾ 3181ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಂಟ್ವಾಳ ರೋಟರಿ ಕ್ಲಬ್‌ನ ಅತ್ಯುತ್ತಮ ಪ್ರಶಸ್ತಿಯಾದ ಪ್ಲಾಟಿನಮ್ ಪ್ಲಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ರೋಟರಿ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ವಿವರಿಸಿದರು.