ಡೈಲಿ ವಾರ್ತೆ:17 ಜೂನ್ 2023
ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಟ್ಟವೇರುವ ಅದ್ರಷ್ಟಶಾಲಿ ಯಾರು!
ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ 2020 ರ ಅವಧಿಗೆ ಮೊದಲಿಗೆ ಸಾಮಾನ್ಯ ಮಹಿಳಾ ಮೀಸಲಾತಿ ಬಂದಿದ್ದು, ಅದರಲ್ಲಿ ಬಿಜೆಪಿಯಿಂದ ಐದು ಜನ ಕಾಂಗ್ರೆಸನಿಂದ ಒಬ್ಬರು, ಪಕ್ಷೇತರ ಒಬ್ಬರು ಸೇರಿ ಒಟ್ಟಿಗೆ ಏಳು ಜನ ಮಹಿಳೆಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸುವ ಅವಕಾಶ ಬಂದಿತ್ತು. ನಂತರದ ದಿನದಲ್ಲಿ ರಾಜಕೀಯ ಒಳಸುಳಿಯಿಂದ ಹಿಂದುಳಿದ ಬಿ. ಮೀಸಲಾತಿ ಬಂದು ಸುಲತಾ ಹೆಗ್ಡೆ ಮತ್ತು ಸುಕನ್ಯಾ ಶೆಟ್ಟಿ ಇಬ್ಬರು ಅವಕಾಶ ಪಡೆದು ಅದರಲ್ಲಿ ಸುಲತಾ ಹೆಗ್ಡೆ ಅಧ್ಯಕ್ಷರಾದರು. ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಅನುಸೂಯ ಹೇರಳೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಎರಡೂವರೆ ವರ್ಷದ ಅವಧಿ ಮುಗಿದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ತೆರುವು ಆದ ಹಿನ್ನಲೆ ಮತ್ತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.
ಸಾಮಾನ್ಯ ಮೀಸಲಾತಿ ಬಂದಲ್ಲಿ ಬಿಜೆಪಿಯ ಶ್ಯಾಮ್ ಸುಂದರ ನೈರಿ, ಸಂಜೀವ ದೇವಾಡಿಗ, ರಾಜು ಪೂಜಾರಿ, ಮತ್ತು ಕಾಂಗ್ರೆಸ್ ಪಕ್ಷದ ಶ್ರೀನಿವಾಸ ಅಮೀನ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಸಾಮಾನ್ಯ ಮಹಿಳೆ ಬಂದಲ್ಲಿ ಬಿಜೆಪಿಯ ರೇಖಾಕೇಶವ, ಸುಕನ್ಯಾ ಶೆಟ್ಟಿ, ಅನುಸೂಯ ಹೇರಳೆ, ಗಿರಿಜಾ ಪೂಜಾರಿ, ಮತ್ತೆ ಇನ್ನೊಂದು ಅವಧಿಗೆ ಸುಲತಾ ಹೆಗ್ಡೆ ಕೂಡ ಪ್ರಯತ್ನ ನಡೆಸಬಹುದು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಅದರ ಪ್ರಭಾವ ಬಳಸಿಕೊಂಡಲ್ಲಿ ಕಾಂಗ್ರೆಸ್ ಪಕ್ಷದ ಎಸ್ಸಿ ಮೀಸಲಾತಿಯಲ್ಲಿ ಆಯ್ಕೆಗೊಂಡರೆ ಗಣೇಶ್ ಕಾರ್ಕಡ ಅಧ್ಯಕ್ಷರಾಗುವ ಅವಕಾಶ ಕೂಡ ಇದೆ.
ಸುಮಾರು 3 ದಶಕಗಳ ಹಿಂದೆ ಸಾಲಿಗ್ರಾಮ ಪುರಸಭಾ ಇರುವಾಗ ಕಾಂಗ್ರೆಸ್ ಪಕ್ಷದಿಂದ ತಾರಾನಾಥ್ ಹೊಳ್ಳರು 2 ಅವಧಿಗೆ ಅಂದರೆ ಹತ್ತು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ದಿನದಲ್ಲಿ ತಾರಾನಾಥ್ ಹೊಳ್ಳರು ಸಾಲಿಗ್ರಾಮ ಪುರಸಭಾವನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಡುವ ಕಾನೂನು ಹೋರಾಟದಲ್ಲಿ ಹತ್ತು ವರ್ಷ ಯಾವುದೇ ಪಕ್ಷಕ್ಕೆ ಅಧಿಕಾರ ಇಲ್ಲವಾಗಿತ್ತು.
ಅಂದಿನ ಬ್ರಹ್ಮಾವರ ಕ್ಷೇತ್ರದ ಶಾಸಕರಾದ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತಗೆ ಪೌರಸಮಿತಿಯಿಂದ ಆಯ್ಕೆಯಾದ ರಫಿಯೂದ್ಧೀನ್ ಅಧ್ಯಕ್ಷರಾಗಿ ಎರಡೂವರೆ ವರ್ಷ, ಮೈತ್ರಿ ಹೇರಳೆ ಉಳಿದ ಎರಡೂವರೆ ವರ್ಷ ಅಧ್ಯಕ್ಷರಾಗಿದ್ದರು. ನಂತರ ಬಿಜೆಪಿ ಪಕ್ಷ ಬಹುಮತ ಬಂದು ರಾಜು ಪೂಜಾರಿ ಸತತವಾಗಿ ಐದು ವರ್ಷ ಅಧ್ಯಕ್ಷರಾದರು. ನಂತರ ಮತ್ತೆ ಬಿಜೆಪಿಯ ಶ್ರೀಮತಿ ಸಾಧು ಅವರು ಎರಡೂವರೆ ವರ್ಷ ಅಧಿಕಾರ ನಡೆಸಿದರು. ನಂತರ ಸಾಮಾನ್ಯ ಮಹಿಳೆ ಬಂದಾಗ ಒಂದು ವರ್ಷ ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದ ವಸುಮತಿ ಮತ್ತು ಉಳಿದ ಒಂದೂವರೆ ವರ್ಷಕ್ಕೆ ರತ್ನಾ ನಾಗರಾಜ್ ಅಧ್ಯಕ್ಷರಾದರೂ ಕೂಡ ಅವರು ಕಾಂಗ್ರೆಸ್ ಪಕ್ಷದ ಆಯ್ಕೆಯಾಗಿರದೆ ಅವರವರ ಸ್ವಂತ ಪ್ರಯತ್ನ ಆಗಿತ್ತು.
ಸಾಲಿಗ್ರಾಮ ಪಟ್ಟಣ ಪಂಚಾಯತನಲ್ಲಿ ಇದುವರೆಗೂ ಅಧಿಕಾರದ ಪಟ್ಟವೇರದ ಕಾಂಗ್ರೆಸ್ ಪಕ್ಷ ರಾಜಕೀಯ ಪ್ರಭಾವ ಬಳಸಿಕೊಂಡು ಎಸ್ಸಿ ಮೀಸಲಾತಿ ತಂದಲ್ಲಿ, ಕಾರ್ಕಡ ಬಡಾಹೋಳಿ 8 ನೇ ವಾರ್ಡಿನಿಂದ ಆಯ್ಕೆಗೊಂಡಿರುವ ಗಣೇಶ್ ಸಾಲಿಗ್ರಾಮ ಪಟ್ಟಣ ಪಂಚಾಯತಿಗೆ ಅಧ್ಯಕ್ಷರಾಗುವ ಯೋಗ ಬರಬಹುದು ಎನ್ನಲಾಗಿದೆ.