ಡೈಲಿ ವಾರ್ತೆ: 17 ಜೂನ್ 2023
ಭಟ್ಕಳ: ಕಾರಿನಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ – 510 ಕೆ.ಜಿ. ಅಕ್ಕಿ ಹಾಗೂ ಕಾರು ವಶಕ್ಕೆ , ಇಬ್ಬರು ಆರೋಪಿಗಳು ಪರಾರಿ
ಭಟ್ಕಳ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾರಿನಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿದ ಆಹಾರ ನಿರೀಕ್ಷಕ ಹಾಗೂ ಪೊಲೀಸ್ ಸಬ್ ಇನ್ಸಪೆಕ್ಟರ್ ವಾಹನ ಸಹಿತ ಪಡಿತ ಅಕ್ಕಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಆಹಾರ ನಿರೀಕ್ಷಕ ಪಾಂಡು ನಾಯ್ಕ ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದು, ಕಾರನ್ನು ಪುರವರ್ಗದ ಪೊಲೀಸ್ ಚೆಕ್ ಪೋಸ್ಟ್ ಬಳಿಯಲ್ಲಿ ತಡೆದು ನಿಲ್ಲಿಸಿದಾಗ ಚಾಲಕ ಸ್ವಲ್ಪ ದೂರದಲ್ಲಿ ಹೋಗಿ ಕಾರನ್ನು ನಿಲ್ಲಿಸಿದ್ದು ಕಾರಿನಿಂದ ಇಬ್ಬರು ಇಳಿದು ಓಡಿ ಹೋಗಿದ್ದಾರೆ. ಅವರನ್ನು ಗುರುತಿಸಿದ್ದು ಅವರಲ್ಲಿ ಒಬ್ಬನು ಬೆಳ್ನಿಯ ನಿವಾಸಿ ಸೈಯದ್ ಅಲಿ ಇನ್ನೋರ್ವನ ಪುರವರ್ಗದ ನಿವಾಸಿ ನೌಶಾದ್ ಹಂಚಿ ಮೊಕ್ತಿಯಾರ್ ಅಹಮ್ಮದ್ ಎಂದು ಗುರುತಿಸಿದ್ದು ಅವರ ಮೇಲೆ ತಮ್ಮ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಕಾರಿನಲ್ಲಿ ಒಟ್ಟು 14 ಪ್ಲಾಸ್ಟಿಕ್ ಚೀಲಗಳಿದ್ದು510 ಕೆ.ಜಿ. ಅಕ್ಕಿ ಇದೆ ಎಂದು ತಿಳಿಸಲಾಗಿದ್ದು ಅಕ್ಕಿಯ ಅಂದಾಜು ಬೆಲೆ17,340 ಹಾಗೂ ವಶಪಡಿಸಿಕೊಂಡ ಕಾರಿನ ಬೆಲೆ 1,20,000 ಎಂದು ತಿಳಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.