ಡೈಲಿ ವಾರ್ತೆ:18 ಜೂನ್ 2023

ಹೆಬ್ರಿ: ಟಿಪ್ಪರ್ ಲಾರಿ-ಕ್ಯಾಂಟರ್, ಮಹೀಂದ್ರಾ ಕಾರು ನಡುವೆ ಸರಣಿ ಅಪಘಾತ: ಕ್ಯಾಂಟರ್ ಚಾಲಕ ಸ್ಥಳದಲ್ಲೇ ದಾರುಣ ಸಾವು

ಹೆಬ್ರಿ: ಶನಿವಾರ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರದ ಜಕ್ಕನಮಕ್ಕಿ ಸಮೀಪ ಕಾರು ಹಾಗೂ ಬಸ್ಸು ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಶಿಕ್ಷಕರು ದಾರುಣವಾಗಿ‌‌ ಸಾವನ್ನಪ್ಪಿರುವ ಘಟನೆ‌ ಮರೆಯುವ ಮುನ್ನವೇ ಇದೇ ಸ್ಥಳದಲ್ಲಿ ‌ ಟಿಪ್ಪರ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕ್ಯಾಂಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ‌ನಡೆದಿದೆ.


ಈ ಅಪಘಾತದಿಂದ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಮಹೀಂದ್ರಾ ಥಾರ್ ಕಾರು ಕ್ಯಾಂಟರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ್ದು ಆಗುಂಬೆ ಕಡೆಯಿಂದ ಹೆಬ್ರಿ ಕಡೆಗೆ ಪಿವಿಸಿ ಪೈಪು,ಟ್ಯಾಂಕ್ ಸಾಗಾಟದ ಕ್ಯಾಂಟರ್ ಲಾರಿ ಹಾಗೂ ಹೆಬ್ರಿ ಕಡೆಯಿಂದ ಆಗುಂಬೆ ಮಾರ್ಗವಾಗಿ ತೀರ್ಥಹಳ್ಳಿಕಡೆಗೆ ಹೋಗುತ್ತಿದ್ದ ಮಿನಿ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ.‌ಇದೇವೇಳೆ ಕ್ಯಾಂಟರ್ ಹಿಂದಿನಿಂದ ಬರುತ್ತಿದ್ದ ಮಹೀಂದ್ರಾ ಥಾರ್ ನಿಯಂತ್ರಣತಪ್ಪಿ ಕ್ಯಾಂಟರ್ ಲಾರಿಗೆ ಗುದ್ದಿದೆ. ಜಕ್ಕನಮಕ್ಕಿ ಎಂಬಲ್ಲಿನ ಕಿರಿದಾದ ಹಾಗೂ ತಿರುವಿನಿಂದ ಕೂಡಿದ ಇಳಿಜಾರು ರಸ್ತೆಯಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಹೆದ್ದಾರಿ ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಎನ್ನುವ ಆರೋಪ ‌ಸ್ಥಳೀಯರದಾಗಿದೆ.

ಈ ಸರಣಿ ಅಪಘಾತದಿಂದ ಸುಮಾರು ಒಂದು ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತವಾಗಿದ್ದು‌ ಬಳಿಕ ಹೆಬ್ರಿ ಪೊಲೀಸರು ಸ್ಥಳೀಯರ ಸಹಕಾರದಿಂದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.