ಡೈಲಿ ವಾರ್ತೆ:18 ಜೂನ್ 2023

ಜೂನ್ 20 ರಂದು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾರತದ ಪುನರುತ್ಥಾನ ಎಂಬ ವಿಚಾರ ಸಂಕಿರಣ: ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ಬಂಟ್ವಾಳ : ಕಲ್ಲಡ್ಕ ಶ್ರೀರಾಮ‌ ವಿದ್ಯಾಕೇಂದ್ರ ಪದವಿ ಕಾಲೇಜಿನ‌ ಆಶ್ರಯದಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ಮಂಗಳ ಗಂಗೋತ್ರಿ ಇವರ ಸಹಯೋಗದೊಂದಿಗೆ “ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ” ಎಂಬ ವಿಷಯದಯಲ್ಲಿ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಜೂನ್ 20 ರಂದು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯಲಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸ್ಥಾಪಕ ಡಾ|ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.

ಕಲಿಕೆಯ ಜೊತೆ ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಪ್ರತಿವರ್ಷ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ಸಂಸ್ಕೃತಿಯ ವಿಚಾರದಲ್ಲಿ ಕಾಲೇಜುಗಳಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಿಗೆ ಅಗತ್ಯವಿದೆ ಎಂಬ ನಿಟ್ಟಿನಲ್ಲಿ “ಸಂಕಿರಣ” ಆಯೋಜಿಸ ಲಾಗಿದೆ ಎಂದರು.

ಸುವರ್ಣ ನ್ಯೂಸ್ ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ್ ಹನುಮಕ್ಕನವರ್ “ಸ್ವತ್ವಯುತ ಭಾರತ”, ಶಿವಮೊಗ್ಗದ ವಿಶ್ರಾಂತ ಪ್ರಾಚಾರ್ಯ ಪ್ರೊ.ಬಿ.ಎಂ. ಕುಮಾರಸ್ವಾಮಿ ಇವರು “ಭಾರತೀಯ ಅಭಿವೃದ್ಧಿ ಮಾದರಿಗಳು” , ನಿವೃತ್ತ ಸೇನಾಧಿಕಾರಿ ಕ್ಯಾ ಬ್ರಿಜೇಶ್ ಚೌಟ “ಆಡಳಿತ ಮತ್ತು ನಿರ್ವಹಣೆ ಭಾರತೀಯ ಮಾದರಿ”
ಚಿಂತಕ, ಲೇಖಕ, ಚಕ್ರವರ್ತಿ ಸೂಲಿಬೆಲೆ “ಸ್ವಾಮಿ ವಿವೇಕಾನಂದರ ಚಿಂತನೆಯ ಪ್ರಸ್ತುತತೆ ” ಎಂಬ ವಿಷಯಗಳಲ್ಲಿ ವಿಚಾರ
ಮಂಡಿಸಲಿದ್ದಾರೆ ಎಂದವರು ವಿವರಿಸಿದರು.

ಮಂಗಳೂರು ವಿಶ್ವ ವಿದ್ಯಾನಿಲಯಗಳ 60ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ನೋಂದಣಿ ಮಾಡಿಸಿದ್ದು, ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಈ ಬಾರಿ ಇನ್ನಷ್ಟು ವ್ಯಾಪಕತೆಯನ್ನು ಪಡೆದು ಸುಮಾರು 750ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭರದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ, www.srvk.org ಎಂಬ ವಿದ್ಯಾಕೇಂದ್ರದ ವೆಬ್‌ಸೈಟ್‌ನಲ್ಲಿ ಆಮಂತ್ರಣ ಹಾಗೂ ಸಂಪರ್ಕಿಸ ಬೇಕಾದವರ ವಿವರಗಳು ಲಭ್ಯವಿದೆ ಎಂದವರು ಮಾಹಿತಿ ನೀಡಿದರು.

ಮಾಜಿ ಶಾಸಕ, ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿ ಕೆ.ಪದ್ಮನಾಭ ಕೊಟ್ಟಾರಿ, ಪ್ರಾಂಶುಪಾಲ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.