ಡೈಲಿ ವಾರ್ತೆ:21 ಜೂನ್ 2023
ಬೈಂದೂರು:ದುಸ್ಥಿತಿಯಲ್ಲಿರುವ ಗುಜ್ಜಾಡಿ ಬಸ್ ನಿಲ್ದಾಣದ – ದುರಸ್ತಿಗೆ ಸಾರ್ವಜನಿಕರ ಆಗ್ರಹ!
ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಜ್ಜಾಡಿ ಬಸ್ ನಿಲ್ದಾಣ ಹಲವು ವರ್ಷಗಳಿಂದ ದುರಸ್ತಿ ಭಾಗ್ಯ ಕಾಣದೆ ಶಿಥಿಲಾವಸ್ಥೆ ತಲುಪಿದೆ. ಪ್ರತಿದಿನ ಬೆಳಿಗ್ಗೆ ಐದೂವರೆಯಿಂದ ರಾತ್ರಿ ಒಂಬತ್ತೂವರೆತನಕ ಕುಂದಾಪುರ ಗಂಗೊಳ್ಳಿ ಬೈಂದೂರು ಕಡೆಗೆ ಪ್ರಯಣಿಸುವ ಜನರು ಇದೇ ಬಸ್ ನಿಲ್ದಾಣದಿಂದ ಪ್ರಯಾಣಿಸುತ್ತಾರೆ. ನೂರಾರು ಬಸ್ ಗಳು ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸುವ ಹಾಗೂ ಇಳಿಸುವ ಮೂಲಕ ಸೇವೆ ಸಲ್ಲಿಸುತ್ತಿವೆ.
ಆದರೆ ಈ ಬಸ್ ನಿಲ್ದಾಣದ ಮಾಡಿನ ಹಂಚು, ರೀಪು, ಪಕಾ್ಕಾಸು ಎಲ್ಲವೂ ದುಸ್ಥಿತಿಯಲ್ಲಿದ್ದು ಈ ಮಳೆಗಾಲದಲ್ಲಿ ಬಸ್ ನಿಲ್ದಾಣದ ಮಾಡು ನೆಲ ಕಚ್ಚುವ ಸಂಭವವಿದೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ದುರಸ್ತಿ ಕಾರ್ಯ ಮಾಡುತ್ತಿಲ್ಲ ಎಂಬುದೇ ದುರಷ್ಟಕರ ಸಂಗತಿ.
ಸುತ್ತಲಿನ ಗ್ರಾಮೀಣ ಪ್ರದೇಶಗಳ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಯಾಣಿಸುವ ಬಸ್ಸು ನಿಲ್ದಾಣ ಇದಾಗಿದೆ. ನಾವು ಎರಡು ವರ್ಷಗಳ ಹಿಂದೆಯೇ ಗ್ರಾಮ ಪಂಚಾಯತ್ ಉಪಾಧ್ಯಕ್ಷರಿಗೆ ಬಸ್ ನಿಲ್ದಾಣ ದುರಸ್ತಿ ಮಾಡುವಂತೆ ಲಿಖಿತ ದೂರು ನೀಡಿದ್ದರೂ ದುರಸ್ತಿ ಮಾಡಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀನಾಥ್ ಮೊಗವೀರ ಆಗ್ರಹಿಸಿದ್ದಾರೆ.