ಡೈಲಿ ವಾರ್ತೆ: 21 ಜೂನ್ 2023

ತಂದೆಯಿಂದಲೇ ಮಗಳಿಗೆ ಅಧಿಕಾರ ಹಸ್ತಾಂತರ: ಮಂಡ್ಯ ಸೆಂಟ್ರಲ್ ಠಾಣೆಯಲ್ಲೊಂದು ಅಪರೂಪದ ಸನ್ನಿವೇಶ

ಮಂಡ್ಯ: ನಗರದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ (PSI) ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಅವರು ಇದೀಗ ಎಸ್‌ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ. ಇವರ ಸ್ಥಾನಕ್ಕೆ ಇದೀಗ ಇವರ ಮಗಳು ವರ್ಷ ಪಿಎಸ್‌ಐ ನೇಮಕವಾಗಿದ್ದಾರೆ. ತಂದೆ ವೆಂಕಟೇಶ್ ಅವರು ಮಗಳು ವರ್ಷಗೆ ಹೂಗುಚ್ಛ ನೀಡಿ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ. ಈ ಮೂಲಕ ಮಂಡ್ಯ ಪೊಲೀಸ್ ಇಲಾಖೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.

ಪಿಎಸ್‌ಐ ವೆಂಕಟೇಶ್ ಅವರು ತಮ್ಮ 18ನೇ ವಯಸ್ಸಿನಲ್ಲಿ ಭೂಸೇನೆ ಸೇರಿದರು. 16 ವರ್ಷ ಸೇನೆಯಲ್ಲಿ ಕೆಲಸ ಮಾಡಿ ಬಳಿಕ 2010ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ಸೇರ್ಪಡೆಯಾದರು. ಈ ವೇಳೆ ಸಂಸಾರಕ್ಕೆ ಹೆಚ್ಚು ಟೈಂ ಕೊಡಲು ಅವರಿಂದ ಆಗಿರಲಿಲ್ಲ. ಈ ವೇಳೆ ಮಕ್ಕಳನ್ನು ವೆಂಕಟೇಶ್ ಅವರ ಪತ್ನಿ ಸರ್ಕಾರಿ ಶಾಲೆಯಲ್ಲಿ ಓದಿಸಿದ್ದಾರೆ.

ನನ್ನ ಮಗಳಿಗೆ ನಾನೇ ಅಧಿಕಾರ ಹಸ್ತಾಂತರ ಮಾಡ್ತೀನಿ ಎಂದು ಯಾವತ್ತೂ ಊಹೆ ಮಾಡಿರಲಿಲ್ಲ. ಈ ದಿನ ನನಗೆ ಸಂತೋಷ ಉಂಟು ಮಾಡಿದೆ. ಜನರ ಸೇವೆ ಮಾಡಲು ನನ್ನ ಮಗಳು ಪೊಲೀಸ್ ಇಲಾಖೆಗೆ ಬಂದಿರೋದು ಖುಷಿ ತಂದಿದೆ ಎಂದು ವೆಂಕಟೇಶ್ ಅವರು ಆನಂದದಿಂದಲೇ ಕಣ್ಣೀರು ಹಾಕಿದ್ದಾರೆ.

ಇಂತಹ ಅಪರೂಪದ ಸನ್ನವೇಶವನ್ನು ಎದುರಿಸಿದ ಮಗಳು ವರ್ಷ ಸಹ ಜೀವನ ಅತ್ಯಂತ ಸಂತಸದ ಕ್ಷಣವನ್ನು ಅನುಭವಿಸಿದರು. ನನ್ನ ತಂದೆ ಸೈನ್ಯದಲ್ಲಿ ಇದ್ದ ಕಾರಣ ನಾನು ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ. ನನ್ನ ತಾಯಿ ನಮ್ಮನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿದ್ರು. ಸರ್ಕಾರಿ ಶಾಲೆಯ ಶಿಕ್ಷಕರು ನಮಗೆ ಉತ್ತಮ ಮಾರ್ಗ ತೋರಿಸಿದ್ರು ಹಾಗೂ ತಂದೆಯ ಕಾರ್ಯವೈಖರಿಯನ್ನು ನಾವು ದೂರದಿಂದ ನೋಡುತ್ತಿದ್ದೇವೆ. ಈ ಎಲ್ಲವೂ ನನ್ನ ಪೊಲೀಸ್ ಇಲಾಖೆಗೆ ಸೇರುವಂತೆ ಪ್ರೇರೇಪಿಸಿತು. ಹೀಗಾಗಿ ನಾನು ಪೊಲೀಸ್ ಇಲಾಖೆಗೆ ಸೇರಿದೆ ಎಂದಿದ್ದಾರೆ.

ಈಗ ನನ್ನ ತಂದೆಯ ಜಾಗಕ್ಕೆ ಬಂದು ಕೂರುತ್ತೇನೆ ಎಂದೂ ಕೂಡ ಅಂದುಕೊಂಡಿರಲಿಲ್ಲ. ಈ ಕ್ಷಣವನ್ನು ನಾನು ಯಾವತ್ತೂ ಮರೆಯಲ್ಲ. ಜನರಿಗೆ ನನ್ನಿಂದ ಆಗುವ ಸೇವೆ ಮಾಡುತ್ತೇನೆ. ನನಗೆ ನನ್ನ ತಂದೆ ಹಾಗೂ ಮೇಲಧಿಕಾರಿಗಳು ಬೆನ್ನೆಲುಬಾಗಿ ಇದ್ದಾರೆ ಎಂದು ವರ್ಷ ಸಹ ಕಣ್ಣೀರು ಹಾಕಿದರು.