ಡೈಲಿ ವಾರ್ತೆ:22 ಜೂನ್ 2023

ಬಾಡಿಗೆದಾರರ ಕಿರುಕುಳ:ಮನೆ ಒಡತಿ ಆತ್ಮಹತ್ಯೆ, ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವು

ಹಾಸನ: ಬಾಡಿಗೆದಾರರ ಕಿರುಕುಳದಿಂದ ಮನೆ ಒಡತಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾಸರಕೊಪ್ಪಲಿನಲ್ಲಿ ನಡೆದಿದೆ. ಮಗಳ ಸಾವಿನ ಸುದ್ದಿಯನ್ನು ಕೇಳಿ ತಾಯಿಯೂ ಸಾವಿಗೀಡಾಗಿದ್ದಾರೆ.
ಲಲಿತಾ (55) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಈ ಸುದ್ದಿ ಕೇಳಿ ಲಕ್ಷಮ್ಮ (75) ಆಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ.

ಲಲಿತಾ ಹಾಗೂ ಪತಿ ನಾಗರಾಜ ದಾಸರಕೊಪ್ಪಲು ಬಡಾವಣೆಯಲ್ಲಿ ವಾಸಕ್ಕೆ ಹಾಗೂ ಬಾಡಿಗೆ ನೀಡಲು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಇವರು ವಾಸವಾಗಿದ್ದ ಮನೆಯ ಮೇಲ್ಭಾಗದ ಮನೆಗಳನ್ನು ಬಾಡಿಗೆ ಮತ್ತು ಭೋಗ್ಯಕ್ಕೆ ನೀಡಿದ್ದರು. ಎರಡು ವರ್ಷದ ಹಿಂದೆ ಮೊದಲ ಮಹಡಿಯ ಮನೆಯನ್ನು ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ ಹಾಗೂ ನಟರಾಜ ದಂಪತಿಗೆ ಭೋಗ್ಯಕ್ಕೆ ನೀಡಿದ್ದರು. ಈ ವೇಳೆ 5 ಲಕ್ಷ ರೂ. ಹಣ ಪಡೆದು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಿದ್ದರು. ಭೋಗ್ಯಕ್ಕೆ ಬಂದ ಒಂದು ವರ್ಷದ ನಂತರ ನಟರಾಜ ದಂಪತಿ ವಿನಾಃ ಕಾರಣ ಲಲಿತಾ ಅವರೊಂದಿಗೆ ಜಗಳ ತೆಗೆಯುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರಶ್ನಿಸಿದರೆ ಲಲಿತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದೇ ವಿಚಾರಕ್ಕೆ ಒಮ್ಮೆ ನಾಗರಾಜ ಮತ್ತು ಲಲಿತಾ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಜೂ.16 ರಂದು ಸರ ಕಳ್ಳತನ ಆರೋಪ ಮಾಡಿ ಜಗಳ ತೆಗೆದಿದ್ದರು. ಇದರಿಂದ ಬೇಸರಗೊಂಡ ಲಲಿತಾ ಮನೆ ಬಿಟ್ಟು ಹೋಗಿದ್ದರು. ಬಳಿಕ ಪತಿ ನಾಗರಾಜ ಎಲ್ಲಾ ಕಡೆ ಹುಡುಕಾಡಿದ್ದು, ಜೂ.17ರ ಬೆಳಗ್ಗೆ ನಂಜದೇವರ ಕಾವಲು ಗ್ರಾಮದ ಅವರ ಜಮೀನಿನಲ್ಲಿ ಕಳೆನಾಶಕ ಕುಡಿದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಲಲಿತಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂ.20ರ ರಾತ್ರಿ ಲಲಿತಾ ಸಾವನ್ನಪ್ಪಿದ್ದರು. ಬುಧವಾರ ಮಗಳ ಸಾವಿನ ಸುದ್ದಿ ಕೇಳಿ ಅವರ ತಾಯಿ ಲಕ್ಷಮ್ಮ ಕೂಡ ನಿಧನರಾಗಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.