ಡೈಲಿ ವಾರ್ತೆ: 27 ಜೂನ್ 2023

ಉತ್ತರ ಕನ್ನಡದಲ್ಲಿ ಅಬ್ಬರದ ಮಳೆ: ಶಾಲಾ ಕೊಠಡಿಗೆ ನುಗ್ಗಿದ ನೀರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರೆದಿದ್ದು, ಕರಾವಳಿ ಭಾಗದಲ್ಲಿ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಭಟ್ಕಳದಲ್ಲಿ ಅಬ್ಬರದ ಮಳೆ ಸುರಿದಿದ್ದು, ಹಲವು ಕಷ್ಟನಷ್ಟಗಳು ಸಂಭವಿಸಿದೆ.

ಧಾರಾಕಾರ ಮಳೆ ಸುರಿದ ಪರಿಣಾಮ ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದ ಕಳಸಿನಮೊಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು, ಕೊಠಡಿಯಲ್ಲಿ ಕೂರಲಾಗದೇ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಹೊನ್ನಾವರದ ಮುಗ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣಿಮನೆಯ ರಸ್ತೆಯಲ್ಲಿ ಆಟೋ ರಿಕ್ಷಾದ ಮೇಲೆ ಮರ ಬಿದ್ದು ಅದೃಷ್ಟವಶಾತ್ ಆಟೋ ಚಾಲಕ ಹಳಗೇರಿಯ ಶ್ರೀನಾಥ್ ಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಇನ್ನೂ ಐದು ದಿನ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಶಿರಸಿ, ಸಿದ್ದಾಪುರ, ಮುಂಡಗೋಡು, ಹಳಿಯಾಳ, ಯಲ್ಲಾಪುರ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಕರಾವಳಿ ಭಾಗದ ಕುಮಟಾ, ಭಟ್ಕಳ, ಕಾರವಾರ, ಹೊನ್ನಾವರ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರ ಭೂ ಕುಸಿತಕ್ಕೆ ಕಾರಣವಾಗಿದೆ. ಇಂದು ಕುಮಟಾದ ತಂಡ್ರಗುಳಿ ಭಾಗದ ಹೆದ್ದಾರಿ ಅಂಚಿನಲ್ಲಿ ಗುಡ್ಡ ಕುಸಿದ ಪರಿಣಾಮ ಕಲ್ಲುಬಂಡೆ ಮನೆಗೆ ಅಪ್ಪಳಿಸಿ ಗೋಡೆ ಬಿರುಕು ಬಿಟ್ಟಿದೆ. ಕಾರವಾರ ಭಾಗದ ನೌಕಾ ನೆಲೆಯ ಹೆದ್ದಾರಿ ಭಾಗದಲ್ಲಿ ಸಹ ಗುಡ್ಡ ಕುಸಿದು ದ್ವಿಮುಖ ಸಂಚಾರವನ್ನು ಬಂದ್ ಮಾಡಲಾಗಿದೆ. ದಶಕದಿಂದ ಚತುಷ್ಪತ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ಈ ಭಾಗದ ಜನವಸತಿ ಪ್ರದೇಶಕ್ಕೆ ಹೆಚ್ಚಿನ ಮಳೆಯಾದರೆ ನೀರು ತುಂಬುವ ಆತಂಕ ಮನೆಮಾಡಿದೆ.