ಡೈಲಿ ವಾರ್ತೆ: 4 ಜುಲೈ 2023

ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಭಾರೀ ಮಳೆ,ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ, ನೇತ್ರಾವತಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ

ಬಂಟ್ವಾಳ : ತಾಲೂಕಿನಲ್ಲಿ ಸೋಮವಾರದಿಂದ ನಿರಂತರ ಹಾಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಮನೆ ಹಾನಿ ಪ್ರಕರಣಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ.

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ತಾಲೂಕಿನ ಜೀವನದಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ನೀರಿನ ಮಟ್ಟ 3.2 ಮೀಟರ್ ಗೆ ಏರಿಕೆಯಾಗಿದೆ.

ಶಾಲಾ-ಕಾಲೇಜುಗಳಿಗೆ ಸೋಮವಾರ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್
ಎಂ.ಪಿ ಅವರು ಆದೇಶಿಸಿದ್ದಾರೆ.

ಸಜಿಪಮೂಡ ಗ್ರಾಮದ ಬೊಳ್ಳಾಯಿ-ಪಟ್ಟುಗುಡ್ಡೆ ನಿವಾಸಿ ಸೈನಾಝ್ ಅವರ ಮನೆ ಶೌಚಾಲಯದ ಶೀಟಿನ ಮೇಲೆ ಮರ ಬಿದ್ದು ಹಾನಿಯಾಗಿದೆ.

ತುಂಬೆ ಗ್ರಾಮದ ಪದ್ಮನಾಭ ಅವರ ತಡೆಗೋಡೆ ಕುಸಿದು ದನದ ಕೊಟ್ಟಿಗೆಗೆ ಹಾನಿಯಾಗಿದೆ.

ಕೇಪು ಗ್ರಾಮದ ಕೋಡಂದೂರು ಜಯರಾಮ ನಾಯ್ಕ ಅವರ ತೋಟದಲ್ಲಿ ಮರ ಬಿದ್ದು ಅಡಿಕೆ ಮರಗಳಿಗೆ ಹಾನಿಯಾಗಿದೆ.

ಮಾಣಿಲ ಗ್ರಾಮದ ಓಟೆಪಡ್ಪು ನಿವಾಸಿ ನಾರಾಯಣ ನಾಯ್ಕ ಅವರ ಕೊಟ್ಟಿಗೆಗೆ ಗುಡ್ಡ ಕುಸಿದು ಹಾನಿಯಾಗಿರುತ್ತದೆ.

ಅನಂತಾಡಿ ಗ್ರಾಮದ ಬಾಕಿಲ ನಿವಾಸಿ ಶಕುಂತಲಾ ಕೋಂ ದಿವಂಗತ ಸೀತಾರಾಮ ಆಚಾರ್ಯ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ಗಂಗಾಧರ ಎಂಬುವವರ ಮನೆಯಿಂದ ಪ್ರತ್ಯೇಕ ಇರುವ ಕೊಟ್ಟಿಗೆಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹಾನಿಯಾಗಿರುತ್ತದೆ.ಯಾವುದೇ ಜೀವ ಹಾನಿಯಾಗಿರುವುದಿಲ್ಲ…

ಮಾಣಿ ಗ್ರಾಮದ ಮಾಣಿ ಕೋಡಿ ಎಂಬಲ್ಲಿ ಎಂ . ಜಿ. ಬಾಬು ನಲ್ಕೆ ಬಿನ್ ಗಂಗಯ್ಯ ನಲ್ಕೆ ರವರ ವಾಸ್ತವ್ಯದ ಹಳೆಯ ಮನೆಗೆ ತೀವ್ರ ಹಾನಿಯಾಗಿರುತ್ತದೆ.

ಪೆರಾಜೆ ಗ್ರಾಮದ ಮಂಜೊಟ್ಟಿ ಎಂಬಲ್ಲಿ ಶರತ್ ಬಿನ್ ದಿ. ಚಂದಪ್ಪ ಗೌಡ ಎಂಬವರ ವಾಸ್ತವ್ಯದ ಮನೆಯ ತಡೆಗೋಡೆ ಕುಸಿದು ಬಿದ್ದಿದ್ದು ವಾಹನ ನಿಲ್ಲಿಸಲು ಮಾಡಿದ ಸೀಟಿನ ಶೆಡ್ ಕೂಡಾ ಬಿದ್ದಿರುತ್ತವೆ.. 4 ತೆಂಗಿನ ಸಸಿ ಮತ್ತು 8 ಅಡಿಕೆ ಸಸಿಗೆ ಹಾನಿಯಾಗಿರುತ್ತದೆ.