ಡೈಲಿ ವಾರ್ತೆ:08 ಜುಲೈ 2023

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಹಲವೆಡೆ ಮರಬಿದ್ದು ಹಾನಿ

ಗೋಕರ್ಣ: ಇಲ್ಲಿಯ ಪ್ರಮುಖ ಸ್ಥಳಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗುತ್ತಿದ್ದು ವಾಹನ ಸಂಚಾರ ಕೂಡ ಅಸ್ಥವ್ಯಸ್ಥಗೊಳ್ಳುವಂತಾಗಿದೆ. ಮಹಾಬಲೇಶ್ವರ ದೇವಾಲಯದ ಭೋಜನ ಶಾಲೆಯ ಛಾವಣಿಯ ಮೇಲೆ ತೆಂಗಿನ ಮರ ಬಿದ್ದು, ಕಬ್ಬಿಣದ ರೋಡ್ ತಗಡು ಸಂಪೂರ್ಣ ಹಾನಿಗೊಳಗಾಗಿದೆ. ಈ ಸಂದರ್ಭದಲ್ಲಿ ಇಲ್ಲಿ ಯಾರೂ ಇರದಿದ್ದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇಲ್ಲಿ ಭೋಜನಕ್ಕೆ ಬರುವ ಭಕ್ತರು ಶ್ರೀ ಮಹಾಬಲೇಶ್ವರನೇ ನಮ್ಮನ್ನು ಕಾಪಾಡಿದ್ದಾನೆ ಎಂದು ಧನ್ಯತಾ ಭಾವದಿಂದ ನುಡಿಯುತ್ತಾರೆ. ನಂತರ ದೇವಸ್ಥಾನದ ಆಡಳಿತ ಮಂಡಳಿಯವರು ಮರವನ್ನು ತೆಗೆದು ತ್ವರಿತ ಗತಿಯಲ್ಲಿ ಛಾವಣಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.

ಇನ್ನು ಮಾದನಗೇರಿ-ಗೋಕರ್ಣ ರಾಜ್ಯ ಹೆದ್ದಾರಿಯಲ್ಲಿಯೂ ಕೂಡ ಮಳೆಯಿಂದಾಗಿ ರಸ್ತೆಯಮೇಲೆ ನೀರು ನಿಂತಿದೆ. ಒಮ್ಮೆ ದೊಡ್ಡ ವಾಹನ ಬಂದರೆ ದ್ವಿಚಕ್ರ ವಾಹನ ಎದುರಿಗೆ ಸಾಗುತ್ತಿದ್ದರೂ ಕೂಡ ವಾಹನದ ರಭಸಕ್ಕೆ ನೀರು ದ್ವಿಚಕ್ರ ವಾಹನದವರನ್ನು ದೂಡಿದಂತಾಗುತ್ತದೆ. ಹೀಗಾಗಿ ಅಲ್ಲಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥವಾಗುತ್ತಿರುವುದು ಕಂಡುಬರುತ್ತಿದೆ.

ಇದು ರಾಜ್ಯ ಹೆದ್ದಾರಿಯಾಗಿದ್ದರೂ ಕೂಡ ರಸ್ತೆ ಅಗಲೀಕರಣವಾಗಿಲ್ಲ ಹಾಗೇ ರಸ್ತೆಯ ಮೇಲೆ ನೀರು ನಿಂತರು ಕೂಡ ಅದನ್ನು ಗಟಾರ ವ್ಯವಸ್ಥೆ ಮಾಡಿ ನೀರು ಹರಿಯದಂತೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಮಳೆ ಹೆಚ್ಚಾದಾಗಲೆಲ್ಲ ಇಲ್ಲಿ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ. ರಸ್ತೆ ನಿರ್ವಹಣೆಗೆ ಬರುತ್ತಿರುವ ಹಣವೂ ಕೂಡ ಭಾರದಿರುವುದರಿಂದ ನಮ್ಮಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ಸೋಮನಾಥ ಭಂಡಾರಿ ಅಸಹಾಯಕತೆಯಿಂದ ನುಡಿಯುತ್ತಾರೆ.
ಇನ್ನು ಕಡಮೆ, ಹೊಸ್ಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೂಡ ನೀರು ತುಂಬಿದ್ದರಿಂದಾಗಿ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದೆ. ರಸ್ತೆಯೂ ತಗ್ಗಾಗಿರುವುದರಿಂದ ಇಲ್ಲಿ ಮಳೆ ನೀರು ನಿಂತು ಪ್ರತಿಸಲ ಸಮಸ್ಯೆ ಉಂಟು ಮಾಡುತ್ತಿದೆ. ಹೀಗಾಗಿ ಸ್ಥಳೀಯರು ಶಾಲೆಗೆ ಹಾಗೂ ಇತರೆ ಕಡೆಗಳಲ್ಲಿ ತೆರಳಬೇಕಾದರೆ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಆದರೆ ಬೇರೆಡೆ ನೀರು ಬಿಟ್ಟುಕೊಡಲು ಜಾಗವಿಲ್ಲದಿರುವುದರಿಂದ ಇವರ ಪಾಲಿಗೆ ಅತಿಯಾದ ಮಳೆಯೇ ಮುಳ್ಳಾಗಿ ಪರಿಣಮಿಸಿದೆ.

ಮಳೆಯಿಂದಾಗಿ ಏರಿಕೆಯಾಗುತ್ತಿರುವ ಗಂಗಾವಳಿ ನದಿ, ಜನರಿಗೆ ಕಟ್ಟೆಚ್ಚರ: ನಿರಂತರವಾಗಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಘಟ್ಟದ ಮೇಲ್ಭಾಗದಲ್ಲಿಯೂ ಕೂಡ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದಾಗಿ ಗಂಗಾವಳಿ ನದಿ ನಿಧಾನವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ನದಿ ದಡದ ನಿವಾಸಿಗಳಿಗೆ ತಾಲೂಕು ಆಡಳಿತದ ವತಿಯಿಂದ ಕಟ್ಟೆಚ್ಚರ ನೀಡಲಾಗಿದ್ದು, ಸ್ವಲ್ಪ ಸಮಸ್ಯೆ ಉಂಟಾದರೂ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಇಲ್ಲಿ ಅಷ್ಟಾಗಿ ಮಳೆಯಾಗದಿದ್ದರೂ ಘಟ್ಟದ ಮೇಲ್ಭಾಗವಾದ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಶಿರಸಿ, ಯಲ್ಲಾಪುರದಲ್ಲಿ ಮಳೆಯಾದರೆ ಅದು ನೇರವಾಗಿ ಪರಿಣಾಮ ಉಂಟಾಗುವುದು ಅಂಕೋಲಾ ಮತ್ತು ಕುಮಟಾ ತಾಲೂಕಿಗೆ. ಇಲ್ಲಿ ನೀರು ಉಕ್ಕಿ ಹರಿಯುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವುದರ ಜತೆಗೆ ನೆರೆಯೂ ಕೂಡ ಉಂಟಾಗುತ್ತದೆ. ಹೀಗಾಗಿ ಮನೆ ಮುಳುಗಡೆ ಸೇರಿದಂತೆ ಪ್ರಾಣಹಾನಿಯಾಗುವ ಸಾಧ್ಯತೆಯೂ ದಟ್ಟವಾಗಿರುತ್ತದೆ.
ಗಂಗಾವಳಿ ನದಿಗೆ ನೆರೆ ಉಂಟಾದಾಗಲೆಲ್ಲ ಸಾವು-ನೋವುಗಳು ಉಂಟಾಗುತ್ತಿದೆ. ಹೀಗಾಗಿ ನದಿ ತಟದ ಜನರು ಭಯದಿಂದಲೇ ವಾಸಿಸುವಂತಾಗಿದೆ. ಘಟ್ಟದ ಮೇಲ್ಭಾಗದಲ್ಲಿ ಮಳೆಯಾದರೆ ಅದರ ದುರಂತ ಈ ಭಾಗದ ಮೇಲಾಗುತ್ತದೆ. ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯವರು ಕೂಡ ಆಗಾಗ ಮಾಹಿತಿಯನ್ನು ಪಡೆಯುತ್ತಿದ್ದಾರೆ.