ಡೈಲಿ ವಾರ್ತೆ: 10 ಜುಲೈ 2023
ಶಿವಾಜಿನಗರ: ಮಸೀದಿಯಲ್ಲಿ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ಪೊಲೀಸರ ವಶಕ್ಕೆ – ಈತನಿಗಾಗಿ ಮೂರು ರಾಜ್ಯ ಸುತ್ತಿದ ಅಧಿಕಾರಿಗಳು!
ಬೆಂಗಳೂರು: ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಸೈಯದ್ ಖಾಜಿ ಮಹಮ್ಮದ್ ಅನ್ವರ್‌ರುಲ್ಲಾ ಖಾನ್(37) ಬಂಧಿತ ಆರೋಪಿಯಾಗಿದ್ದಾನೆ.
ಜುಲೈ 5ರಂದು ಬೆಂಗಳೂರಿಗೆ ಬಂದಿದ್ದ ಸೈಯದ್, ಮದರಸಾ ಹೆಸರಿನಲ್ಲಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದನು. ಹೀಗೆ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿ ಬಳಿ ಚಂದಾ ಪಡೆದಿದ್ದ ಅನ್ವರ್‌ರುಲ್ಲಾ ಖಾನ್ ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದಾನೆ. ಇದಕ್ಕೆ ಸಿಬ್ಬಂದಿ ಮಸೀದಿಯಲ್ಲಿ ಮಲಗಲು ಅವಕಾಶವಿಲ್ಲ ಎಂದಿದ್ದಾರೆ.
ಇದರಿಂದ ಕೋಪಗೊಂಡು ಮೆಜೆಸ್ಟಿಕ್‌ಗೆ ತೆರಳಿ ಕರ್ನೂಲ್ ಬಸ್ ಹತ್ತಿದ ಸಯ್ಯದ್, ಬಸ್ ಚಿಕ್ಕಬಳ್ಳಾಪುರ ದಾಟುತ್ತಿದ್ದಂತೆ ಮಸೀದಿಯವರಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿ ರಾತ್ರಿ 10 ಗಂಟೆಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಹೇಳಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿದೆ. ಬಳಿಕ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ನಂತರ ಆಂಧ್ರಕ್ಕೆ ತೆರಳಿದ್ದ ಶಿವಾಜಿನಗರ ಪೊಲೀಸರು ಕರ್ನೂಲ್ನಿಂದ ತೆಲಂಗಾಣದ ಮೆಹಬೂಬ್ನಗರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಹಿನ್ನೆಲೆಯ ಬಗ್ಗೆ ಮಹಾರಾಷ್ಟ್ರ ಮತ್ತು ಆಂಧ್ರ ಪೊಲೀಸರಿಂದ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಈತ ಬಿಎಸ್‌ಸಿ ಪದವಿ ಮುಗಿಸಿ ನಿರುದ್ಯೋಗಿಯಾಗಿದ್ದನು. ಹೀಗಾಗಿ ಊರೂರು ಸುತ್ತಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದ, ಆರೋಪಿಯು ಈ ಹಣದಲ್ಲೇ ಜೀವನ ಸಾಗಿಸುತ್ತಿದ್ದನು. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.