ಡೈಲಿ ವಾರ್ತೆ:11 ಜುಲೈ 2023

ಪುನೀತ್ ಫೋಟೋ ತೆಗೆಸಿದ್ದಕ್ಕೆ ಯುವಕನ ಹತ್ಯೆ:6 ಮಂದಿ ಬಂಧನ

ಮೈಸೂರು: ಪಟ್ಟಣದಲ್ಲಿ ಶನಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ, ಭಾನುವಾರವೂ ಮುಂದುವರಿದು ಯುವ ಬ್ರಿಗೇಡ್ ಸಂಚಾಲಕನ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಕೊಲೆಗೆ ಸಂಬಂಧಿಸಿದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಿ.ನರಸೀಪುರ ಪಟ್ಟಣದ ಹೊರ ವಲಯದ ಸಂತಮಾಳದ ಸಮೀಪದ ಸರ್ವಿಸ್ ಸೆಂಟರ್‌ನ ಬಳಿ ಈ ಘಟನೆ ನಡೆದಿದೆ. ಪಟ್ಟಣದ ಶ್ರೀರಾಂಪುರ ಕಾಲನಿ ನಿವಾಸಿ, ಯುವ ಬ್ರಿಗೇಡ್‌ನ ತಿ.ನರಸೀಪುರ ತಾಲೂಕು ಸಂಚಾ ಲಕ ವೇಣುಗೋಪಾಲ್ ನಾಯಕ್ (32) ಮೃತರು. ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರಕರಣ ಸಂಬಂಧ, ನಿನ್ನೆ ಆರೋಪಿಗಳಾದ A1 ಮಣಿಕಂಠ(33), A2 ಆರೋಪಿ ಸಂದೇಶ್ (36) ಅವರನ್ನು ಪೊಲೀಸರು ಬಂಧಿಸಿದ್ದು, ಇಂದು ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಿದ್ದ ಮೈಸೂರು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂದು A3 ಅನಿಲ್, A4 ಶಂಕರ್ ಅಲಿಯಾಸ್ ತುಪ್ಪ, A5 ಮಂಜು ಹಾಗೂ A6 ಹ್ಯಾರಿಸ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ.

ನಡೆದಿದ್ದೇನು?: ಶನಿವಾರ ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಮೆರವಣಿಗೆ ನಡೆದಿತ್ತು. ಹನುಮ ಜಯಂತಿ ವೇಳೆ ಮೆರವಣಿಗೆಯಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಹಾಕಿದ್ದರು. ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನಲೆ ವೇಣುಗೋಪಾಲ್ ಹನುಮ ಜಯಂತಿ ಮೆರವಣಿಗೆಯಲ್ಲಿ ಪುನೀತ್ ಫೋಟೋ ಬೇಡ ಎಂದು ತೆಗೆಸಿದ್ದರು. ಇದರಿಂದ ಅಲ್ಲಿ ಜಗಳ ಶುರುವಾಗಿತ್ತು.

ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಸ್ಥಳದಲ್ಲಿದ್ದವರು ಎರಡೂ ಗುಂಪುಗಳನ್ನು ಸಮಾಧಾನ ಮಾಡಿ ಕಳುಹಿಸಿದ್ದರು. ಭಾನುವಾರ ರಾತ್ರಿ ಗಲಾಟೆ ಮುಂದುವರಿ ದಿದ್ದು, ವೇಣುಗೋಪಾಲ್ ಕೊಲೆಯಲ್ಲಿ ಅಂತ್ಯವಾಗಿದೆ.
ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆಗೆ ಹನುಮ ಜಯಂತಿಯಂದು ಹಾಕಲಾಗಿದ್ದ ಪುನೀತ್ ರಾಜ್ ಕುಮಾರ್ ಫೋಟೋವನ್ನು ತೆಗೆಸಿದ್ದೆ ಕಾರಣ ಎನ್ನಲಾಗುತ್ತಿದೆ. 6 ಮಂದಿ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.