ಡೈಲಿ ವಾರ್ತೆ: 13 ಜುಲೈ 2023

ಬೈಂದೂರು:ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ಅಂಬರ್ ಗ್ರೀಸ್ ಎಂದು ವಂಚಿಸಲು ಯತ್ನ – ಮೂವರ ಬಂಧನ

ಬೈಂದೂರು: ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದಲ್ಲಿ ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10 ಲಕ್ಷ ರೂ. ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ನಿರಂಜನ್ ಎಸ್ (26), ಮಿಲನ್ ಮೋನಿಶ್ ಶೆಟ್ಟಿ (27), ಪೃಥ್ವಿ ಡಾಮ್ನಿಕ್ (31) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ ಸುಮಾರು 3 ಕೆ.ಜಿ 910 ಗ್ರಾಂ ತೂಕದ ತಿಮಿಂಗಲದ ಅಂಬರ್‌ಸ್ ನಂತಿರುವ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ರೀತಿ ಮೇಣದಂತಹ ವಸ್ತುವಿಗೆ ತಿಮಿಂಗಲದ ಅಂಬರ್ ಗ್ರೀಸ್ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುವ ಜಾಲವು ಸಕ್ರಿಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಂದ ಇರುವಂತೆಯೂ ಹಾಗೂ ಈ ರೀತಿಯ ಯಾವುದೇ ಆಮಿಷಕ್ಕೆ ಒಳಗಾಗಬಾರದೆಂದು ಮತ್ತು ಈ ರೀತಿಯ ಯಾವುದೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.