ಡೈಲಿ ವಾರ್ತೆ: 15 ಜುಲೈ 2023

ಮಂಗಳಮುಖಿಯರ ಸೋಗಿನಲ್ಲಿ ಸಾರ್ವಜನಿಕರನ್ನು ದೋಚುತ್ತಿದ್ದ ಖದೀಮ ಅರೆಸ್ಟ್

ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಹೆಣ್ಣಿನ ವೇಷ ಧರಿಸಿ, ಮಂಗಳಮಖಿಯರ ಜತೆ ಸೇರಿ ಭಿಕ್ಷಾಟನೆ ಮಾಡುತ್ತಿದಲ್ಲದೆ, ಸ್ಥಳೀಯ ಅಂಗಡಿ ಮಾಲೀಕರಿಗೆ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ನಿವಾಸಿ ಚೇತನ್ ಬಂಧಿತ ಆರೋಪಿ. ಆರೋಪಿ ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದು, ಯಾವುದೇ ಕೆಲಸಕ್ಕೆ ಹೋಗದೆ ನಿತ್ಯ ಹೆಣ್ಣಿನ ವೇಷ ಧರಿಸಿ, ಮಂಗಳಮುಖಿಯರ ಜತೆ ಸೇರಿ ಸುಮಾರು ನಾಲ್ಕೈದು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ. ಅಲ್ಲದೆ, ಇತ್ತೀಚೆಗೆ ತುಮಕೂರು ರಸ್ತೆಯ ಮಂಜುನಾಥನಗರದಲ್ಲಿ ಬಾಡಿಗೆಗೆ ರೂಂ ಪಡೆದು ಆಗಾಗ್ಗೆ ಅಲ್ಲಿಯೇ ಉಳಿದುಕೊಳ್ಳುತ್ತಿದ್ದ.

ಮಂಗಳಮುಖಿಯರ ಜತೆ ಸ್ನೇಹ ಬೆಳೆಸಿದ್ದ ಆರೋಪಿ, ಅವರಿಗೂ ತನ್ನ ಬಗ್ಗೆ ಯಾವುದೇ ವಿಚಾರ ಹೇಳಿಕೊಂಡಿರಲಿಲ್ಲ. ಮತ್ತೊಂದೆಡೆ ಆತ ಗಂಡು ಎಂಬುದು ಆತನ ಜತೆಗಿದ್ದ ಮಂಗಳಮುಖಿಯರಿಗೂ ಎಂಬುದು ತಿಳಿದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯಲ್ಲಿ ಗಂಡು, ಹೊರಗೆ ಹೋದರೆ ಹೆಣ್ಣು
ಪತ್ನಿ, ಮಕ್ಕಳ ಜತೆ ವಾಸವಾಗಿದ್ದ ಚೇತನ್ ಮನೆಯಲ್ಲಿ ಗಂಡಿನ ವೇಷದಲ್ಲಿ ಇರುತ್ತಿದ್ದ. ಮನೆಯಿಂದ ಹೊರಗಡೆ ಬರುತ್ತಿದ್ದಂತೆ ಸೀರೆ, ಚೂಡಿದಾರ ಧರಿಸಿ ರಸ್ತೆ ಬದಿಯಲ್ಲಿ ನಿಂತು ಭಿಕ್ಷಾಟನೆ ಮಾಡುತ್ತಿದ್ದ. ಹಣ ಕೊಡದಿದ್ದರೆ ಸುಲಿಗೆ ರೀತಿಯಲ್ಲಿ ಕಸಿದುಕೊಳ್ಳುತ್ತಿದ್ದ. ಅದನ್ನು ಪ್ರಶ್ನಿಸಿದರೆ ಮಂಗಳಮುಖಿಯರನ್ನು ಕರೆಸಿ ದಾಂಧಲೆ ಮಾಡುತ್ತಿದ್ದ.

ಜತೆಗೆ ಮಂಜುನಾಥನಗರದಲ್ಲಿ ಬಿಎಂಆರ್‌ಸಿಎಲ್ ನಿರ್ಮಿಸುತ್ತಿರುವ ಮೆಟ್ರೋ ಕಾಮಗಾರಿ ಸಮೀಪದಲ್ಲಿ ಶೆಡ್ ನಿರ್ಮಿಸಿ, ಅದನ್ನು ತನ್ನದೆಂದು ಹೇಳಿಕೊಂಡು, ಮುಂದಿನ ದಿನಗಳಲ್ಲಿ ಅದನ್ನು ಬಾಡಿಗೆಗೆ ನೀಡುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ಈತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯ ಮಹಿಳೆಯರು ಆರೋಪಿಯನ್ನು ಪ್ರಶ್ನಿಸಿದಾಗ, ಅವರ ಸೀರೆಯನ್ನು ಎಳೆದಾಡಿ ದೌರ್ಜನ್ಯ ಎಸಗಿದ್ದ. ಹೀಗಾಗಿ ಸ್ಥಳೀಯ ಮಹಿಳೆಯರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಬಂದ ಹಣದಲ್ಲಿ ಕುಟುಂಬ ನಿರ್ವಹಿಸುತ್ತಿದ್ದ. ಈತನ ಕಳ್ಳಾಟ ಆತನ ಪತ್ನಿಗೂ ಗೊತ್ತಿರಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಆರೋಪಿ ಸ್ವಂತ ಮನೆ ನಿರ್ಮಿಸಿದ್ದಾನೆ ಎಂದು ತಿಳಿದು ಬಂದಿದೆ.