ಡೈಲಿ ವಾರ್ತೆ:16 ಜುಲೈ 2023
ಕುಂಭಾಶಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ರಾವ್
ಕುಂದಾಪುರ: ಕುಂದಾಪುರ ತಾಲೂಕು ಕುಂಭಾಶಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಕೆ. ಜಗದೀಶ್ ರಾವ್ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಚಾಯತ್ ಅಧ್ಯಕ್ಷರಿಗೆ ಜೂನ್ 22 ರಂದು ರಾಜೀನಾಮೆ ಪತ್ರ ಸಲ್ಲಿಸಿದ್ದು, ಜುಲೈ 4ರಂದು ಅದನ್ನು ಅಂಗೀಕರಿಸಲಾಗಿದೆ. ಈ ಮೂಲಕ ಉಪಾಧ್ಯಕ್ಷ ಸ್ಥಾನ ತೆರವುಗೊಂಡಿದೆ ಎಂದು ಪಿ ಡಿ ಓ ಅವರು ಕುಂದಾಪುರ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಕುಂಭಾಶಿ ಗ್ರಾಮ ಪಂಚಾಯತ್ ಕಾರ್ಯವೈಖರಿಗೆ ಬೇಸರಗೊಂಡು, ಕುಡಿವ ನೀರು ಸರಬರಾಜು, ಕಸ ವಿಲೇವಾರಿ ಇತ್ಯಾದಿ ಪ್ರಮುಖ ವಿಷಯಗಳಲ್ಲಿ ಪಂಚಾಯತ್ ನ ಬೇಜವಾಬ್ದಾರಿಗಳ ಬಗ್ಗೆ ಮನನೊಂದು, ಇದರಿಂದ ಜನರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸಲು ಅಸಾಧ್ಯವಾದುದರಿಂದ ತಾನು ರಾಜೀನಾಮೆ ನೀಡುತ್ತಿರುವುದಾಗಿ ಜಗದೀಶ್ ರಾವ್ ಹೇಳಿದ್ದಾರೆ.
ಜಗದೀಶ್ ರಾವ್ ಕಳೆದ ಮೇ ತಿಂಗಳಿನಲ್ಲಿಯೇ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಕುಂದಾಪುರ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ್ದರು. ಜೂನ್ 2 ರಂದು ಒಂದು ತಿಂಗಳ ನಂತರ ಉಪವಿಭಗಾಧಿಕಾರಿಗಳ ಕಚೇರಿಯಿಂದ ಹಿಂಬರಹ ನೀಡಿ, ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಬೇಕು ಎಂದು ಸೂಚಿಸಲಾಯಿತು. ಅದರಂತೆ ಜೂನ್ 22ರಂದು ಅವರು ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದರು. ಅವರ ಉಪಾಧ್ಯಕ್ಷ ಹುದ್ದೆಯ ಅವಧಿ ಇನ್ನೆರಡು ತಿಂಗಳು ಇದ್ದಿತ್ತು. ಪ್ರಸ್ತುತ ರಾವ್ ಪಂಚಾಯತ್ ಸದಸ್ಯರಾಗಿ ಮುಂದುವರಿದಿದ್ದಾರೆ.
ರಾವ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಕೆಲವು ಗಂಭೀರ ವಿಷಯಗಳ ಬಗೆಗಿನ ಲೋಪದೋಷಗಳನ್ನು ಉಲ್ಲೇಖಸಿ, ಸೂಕ್ತ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ. ಪಂಚಾಯತ್ ನಲ್ಲಿ ನೀರಿನ ಪಂಪ್ ಆಪರೇಟರ್ ಇಲ್ಲ. ಆದ್ದರಿಂದ ನಳ್ಳಿ ನೀರಿನ ಪೂರೈಕೆ ಮತ್ತು ಬಿಲ್ ವಸೂಲಿ ಸಮರ್ಪಕವಾಗಿ ನಡೆಯದೆ ಜನರಿಗೆ ತೊಂದರೆಯಾಗಿದೆ. ಸಂಜೀವಿನಿ ಸಂಘದವರು ಸರಿಯಾಗಿ ಕಸ ವಿಲೇವಾರಿ ನಿರ್ವಹಿಸದೆ ಕಸದ ಮೂಟೆಗಳು ರಾಶಿಯಾಗಿ ರೋಗ ಭೀತಿ ಹುಟ್ಟಿದೆ. ಕಸ ಸಾಗಿಸುವ ವಾಹನದ ಚಾಲಕ ಕರ್ತವ್ಯಕ್ಕೆ ಬರುತ್ತಿಲ್ಲ.
ಮೂರನೇ ವಾರ್ಡಿನಲ್ಲಿ 82 ಮನೆಗಳ ನಳ್ಳಿ ಸಂಪರ್ಕಕ್ಕೆ ಸುಮಾರು ಐದೂವರೆ ಲಕ್ಷ ರೂ. ಬಿಲ್ ಪಾವತಿಸಲಾಗಿದೆ. ಆದರೆ ಇದುವರೆಗೂ ಸರಿಯಾಗಿ 40 ಮನೆಗಳಿಗೂ ನೀರು ಪೂರೈಕೆಯಾಗುತ್ತಿಲ್ಲ! ಬಿಲ್ ಪಾವತಿಗೆ ಆಕ್ಷೇಪವಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ.
ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪಂಚಾಯತ್ ಗೆ ಸುಮಾರು ಎರಡು ಕೋಟಿ ರೂ ಮಂಜೂರಾದರೂ ಇಲ್ಲಿ ನೀರು ಪೂರೈಕೆ ಸಮಸ್ಯೆ ಪರಿಹಾರವಾಗಿಲ್ಲ. ಈ ಯೋಜನೆಯ ನಿಯಮದಂತೆ ಗ್ರಾಮದ ಎಲ್ಲಾ ಮನೆಗಳಿಗೆ 2,500ರೂ. ಠೇವಣಿ ಪಡೆದು ನಳ್ಳಿ ಸಂಪರ್ಕ ಒದಗಿಸಬೇಕು. ಆದರೆ ಕುಂಭಾಶಿಯಲ್ಲಿ ಠೇವಣಿ ಸಂಗ್ರಹಿಸಿಲ್ಲ ಎಂಬಿತ್ಯಾದಿ ಹಲವು ಲೋಪದೋಷಗಳು, ಸಮಸ್ಯೆಗಳನ್ನು ಜಗದೀಶ ರಾವ್ ಬೊಟ್ಟು ಮಾಡಿ ತೋರಿಸಿದ್ದಾರೆ. ಇವುಗಳ ಬಗ್ಗೆ ಗಮನ ಹರಿಸಿ ಸರಿಪಡಿಸುವಂ ತೆಯೂ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತ್ ನವರು ಇದಕ್ಕೆ ಎಷ್ಟು ಸ್ಪಂದಿಸುತ್ತಾರೆ, ಬೇರೆ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬದನ್ನು ಕಾದು ನೋಡಬೇಕಾಗಿದೆ.