ಡೈಲಿ ವಾರ್ತೆ:17 ಜುಲೈ 2023

72 ಗಂಟೆಯೊಳಗೆ ಸೀಮಾ ಹೈದರ್ ದೇಶ ತೊರೆಯದಿದ್ದರೆ ಬೃಹತ್ ಪ್ರತಿಭಟನೆ:ಹಿಂದೂ ಸಂಘಟನೆಯಿಂದ ಎಚ್ಚರಿಕೆ!

ನವದೆಹಲಿ: ಪಬ್ಜಿ ಆಡುವಾಗ ಪ್ರೀತಿಸಿದ ಯುವಕನ ಜೊತೆಗಿರಲು ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ಗೆ ಗೌ ರಕ್ಷಾ ಹಿಂದೂ ದಳ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಮಹಿಳೆಯನ್ನು ಗಡಿಪಾರು ಮಾಡದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಸೂಚನೆ ನೀಡಿದೆ.
“ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿಕೆಯಾಗಿದ್ದು, 72 ಗಂಟೆಯೊಳಗೆ ಸೀಮಾ ಹೈದರ್ ದೇಶ ತೊರೆಯದಿದ್ದರೆ ಪ್ರತಿಭಟನೆ ನಡೆಸುತ್ತೇವೆ” ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವೇದ್ ನಗರ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಸೀಮಾ ತಾಯ್ನಾಡಿಗೆ ಮರಳದಿದ್ದರೆ ಮುಂಬೈ ಮಾದರಿಯ ದಾಳಿ ನಡೆಸುವುದಾಗಿ ಮುಂಬೈ ಸಂಚಾರ ನಿಯಂತ್ರಣ ಕೊಠಡಿಗೆ ಬೆದರಿಕೆ ಸಂದೇಶ ಬಂದಿತ್ತು. ಈ ಕುರಿತು ಮುಂಬೈ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಸಚಿನ್ ಜೊತೆ ಇರಲು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಮಾತನಾಡಿದ ಸೀಮಾ ಮೇಲೆ ಹಲ್ಲೆ ನಡೆಯಬಹುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಸೀಮಾ ಅಥವಾ ಸಚಿನ್ ಭದ್ರತೆಗಾಗಿ ಔಪಚಾರಿಕವಾಗಿ ಯಾವುದೇ ಮನವಿ ಮಾಡದಿದ್ದರೂ, ಪೊಲೀಸರು ನಿರಂತರ ನಿಗಾ ಇರಿಸಿದ್ದಾರೆ.

ಪಬ್ಜಿ ಆಡುವಾಗ ಪ್ರೀತಿ ಮಾಡಿದ ಸೀಮಾ ಮತ್ತು ಸಚಿನ್ ನೇಪಾಳದ ಕಠ್ಮಂಡುವಿನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಅಲ್ಲಿ ರಹಸ್ಯವಾಗಿ ವಿವಾಹವಾದರು.
ನಂತರ ಪಾಕಿಸ್ತಾನಕ್ಕೆ ಮರಳಿದ ಸೀಮಾ ಅಲ್ಲಿನ ಆಸ್ತಿ ಮಾರಾಟ ಮಾಡಿ, ಮೇ ತಿಂಗಳಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ದೆಹಲಿಗೆ ಬಂದಿದ್ದರು. ಆ ನಂತರ ಸೀಮಾ ಮತ್ತು ಸಚಿನ್ ದಂಪತಿಯಂತೆ ನಟಿಸಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಇದಾಗಿ ಒಂದು ತಿಂಗಳ ನಂತರ, ಕಾನೂನುಬದ್ಧವಾಗಿ ಮದುವೆಯಾಗಲು ನಿರ್ಧರಿಸಿ ವಕೀಲರನ್ನು ಸಂಪರ್ಕಿಸಿದಾಗ ಘಟನ ಮುನ್ನೆಲೆಗೆ ಬಂದಿತು. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಸೀಮಾ ಅವರನ್ನು ಜುಲೈ 1 ರಂದು ಬಂಧಿಸಲಾಗಿತ್ತು. ಯುವತಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಅವರನ್ನು ಕೂಡ ಬಂಧಿಸಲಾಗಿತ್ತು.
ಬಳಿಕ ನ್ಯಾಯಾಲಯ ಅವರಿಗೆ ಜಾಮೀನು ನೀಡಿತು.