ಡೈಲಿ ವಾರ್ತೆ:19 ಜುಲೈ 2023
‘ಗೃಹಲಕ್ಷ್ಮಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಇಂದು ಚಾಲನೆ!
ಬೆಂಗಳೂರು: ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಬಹು ನಿರೀಕ್ಷಿತ ‘ಗೃಹಲಕ್ಷ್ಮಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಈ ಮೂಲಕ ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿಯೂ ಜಾರಿಗೆ ಬಂದಂತಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂತಾದವರ ಸಮ್ಮುಖದಲ್ಲಿ ಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ. ಅಲ್ಲದೆ ಗ್ಯಾರಂಟಿ ಯೋಜನೆಯಾದ ಇದಕ್ಕೆ ಗೃಹಲಕ್ಷ್ಮಿ ಎಂಬ ಹೆಸರು ಕೊಟ್ಟಿದ್ಯಾರು ಎಂಬುದು ಕೂಡ ಇದೇ ಕಾರ್ಯಕ್ರಮದಲ್ಲಿ ಬಹಿರಂಗಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಭಾಗ್ಯದ ಲಕ್ಷ್ಮಿ ಬಾರಮ್ಮ, ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಹಾಡು ಕೂಡ ಹೇಳಿ ಸಂಭ್ರಮಿಸಿದರು. ನಾವು ಈ ಕಾರ್ಯಕ್ರಮದಲ್ಲಿ ಹಚ್ಚಿರುವ ಜ್ಯೋತಿ ರಾಜ್ಯದ ಮನೆಯ ಹೆಣ್ಣುಮಕ್ಕಳ ಬದುಕಿನ ಜ್ಯೋತಿ ಎಂದ ಅವರು, ಈ ಯೋಜನೆಗೆ ಗೃಹಲಕ್ಷ್ಮಿ ಎಂಬ ಹೆಸರು ಕೊಟ್ಟಿದ್ದು ನಾನು ಮತ್ತು ಪ್ರಿಯಾಂಕ್ ಖರ್ಗೆ ಎಂದರು.