ಡೈಲಿ ವಾರ್ತೆ:20 ಜುಲೈ 2023

ಕುಂದಾಪುರ: ಕೊರ್ಗಿ ಗ್ರಾಮದ ದಬ್ಬೆಕಟ್ಟೆ ರಸ್ತೆಯಲ್ಲಿ ‘ಕೋರಗಜ್ಜನ ಪವಾಡ’: ನಿದ್ದೆಗಣ್ಣಿನಲ್ಲಿ ತಡರಾತ್ರಿ 3 ಕಿ.ಮೀ ನಡೆದ 6 ವರ್ಷದ ಬಾಲೆ – ಬಾರ್ ಸಿಬ್ಬಂದಿಗಳಿಂದ ರಕ್ಷಣೆ!

ಕುಂದಾಪುರ:ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪ ದಬ್ಬೆಕಟ್ಟೆ – ತೆಕ್ಕಟ್ಟೆ ರಸ್ತೆಯಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲೆಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಸುಮಾರು 3 ಕಿಲೋಮೀಟರ್ ದೂರ ನಡೆದು ಕೊರಗಜ್ಜನ ನಾಮಫಲಕದ ಮುಂದೆ ಪತ್ತೆಯಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ.


ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಅರ್ಚನಾ ಬಾರ್ ಸಿಬ್ಬಂದಿಗಳಾದ ವಿಶ್ವನಾಥ ಹಾಗೂ ಸ್ನೇಹಿತರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ದಬ್ಬೆಕಟ್ಟೆ – ತೆಕ್ಕಟ್ಟೆ ರಸ್ತೆಯಲ್ಲಿ ಈ ಬಾಲಕಿ ಸಿಕ್ಕಿದ್ದು ಬಳಿಕ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

ಬುಧವಾರ ರಾತ್ರಿ ಚಾರ್ ಕೊಟ್ಟಿಗೆ ಬಾರಿನ ವಿಶು ( ವಿಶ್ವನಾಥ ಪೂಜಾರಿ) ರಾತ್ರಿ ಸರಿ ಸುಮಾರು 2 ಗಂಟೆ ಹೊತ್ತಿಗೆ ಬಾರಿನ ತನ್ನೆಲ್ಲ ಲೆಕ್ಕಾಚಾರವನ್ನು ಪೂರೈಸಿಕೊಂಡು ಸಿಬ್ಬಂದಿಗಳೊಂದಿಗೆ ಮನೆಗೆ ತೆರಳುತ್ತಿರುವಾಗ ದಬ್ಬೆಕಟ್ಟೆ ತೆಕ್ಕಟ್ಟೆ ರೋಡಿನಲ್ಲಿ ಆರು ವರ್ಷದ ಹೆಣ್ಣು ಮಗು ವಿವಸ್ತ್ರವಾಗಿ ಸ್ವಾಮಿ ಕೊರಗಜ್ಜನ ನಾಮಫಲಕದ ಕೆಳಗೆ ನಿಂತಿದ್ದನ್ನು ಕಂಡಿದ್ದಾರೆ. ಆ ಹೊತ್ತಿನಲ್ಲಿ ಒಂಟಿ ಮಗು ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಆಲೋಚಿಸಿ ಪ್ರತಿಯೊಂದು ಚಿತ್ರಣವನ್ನು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡು ಮಗುವಿನ ರಕ್ಷಣೆಗೆ ಧಾವಿಸುತ್ತಾರೆ. ನಂತರ ಮಗುವಿನ ಹತ್ತಿರ ಮಗುವಿನ ಪೂರ್ವ ಪರ ವನ್ನು ವಿಚಾರಿಸಿ ಮಗುವನ್ನ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಇತ್ತ ಮಗು ನಾಪತ್ತೆಯಾದ ವಿಷಯವೇ ತಿಳಿಯದೆ ಮನೆಯವರು ಮಗುವನ್ನು ಕಂಡು ದಂಗಾಗಿ ಹೋಗಿದ್ದಾರೆ.

ನಿದ್ದೆ ಕಣ್ಣಿನಲ್ಲಿ ನಡೆಯುತ್ತಿದ್ದ ಮಗುವನ್ನು ತಡೆದು ನಿಲ್ಲಿಸಿದ ಕೊರಗಜ್ಜ ಪವಾಡ ಮೆರೆದಿದ್ದಾರೆ. ಅವರ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.