ಡೈಲಿ ವಾರ್ತೆ: 21 ಜುಲೈ 2023
ಸದನವನ್ನು ಗೌರವಯುತವಾಗಿ ನಡೆಸುವುದು ನನ್ನ ಕರ್ತವ್ಯ: ಯು.ಟಿ. ಖಾದರ್
ಬೆಂಗಳೂರು: ಶಾಸಕರ ಅಮಾನತು ಕುರಿತು ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, “ಸದನವನ್ನು ಗೌರವಯುತವಾಗಿ ನಡೆಸುವುದು ನನ್ನ ಕರ್ತವ್ಯ, ಇಲ್ಲಿ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಪೀಠಕ್ಕೆ ಅಗೌರವ ತೋರಿದ್ದಕ್ಕೆ ಕ್ರಮ ಕೈಗೊಂಡಿದ್ದೇವೆ. ನನ್ನ ಕರ್ತವ್ಯವನ್ನು ನಾನು ಶಿಸ್ತಿನಿಂದ ನಿರ್ವಹಿಸಿದ್ದೇನೆ” ಎಂದು ಹೇಳಿದರು.
“ಅತೀವ ಬೇಸರದಿಂದ ಅಮಾನತು ಮಾಡಿದ್ದೇವೆ. ಅವರೆಲ್ಲರೂ ನಮ್ಮ ಸದಸ್ಯರೆ. ಐಎಎಸ್ ಅಧಿಕಾರಿಗಳ ದುರ್ಬಳಕೆ ಆರೋಪ ಬಂತು, ಆದರೆ ನೊಟೀಸ್ ಕೊಡದಿದ್ದರು ಚರ್ಚೆಗೆ ಮುಕ್ತ ಅವಕಾಶ ಕೊಟ್ಟಿದ್ದೆ, ರೈತರ ಸಮಸ್ಯೆಗಳಿದ್ದವು ಚರ್ಚೆ ಮಾಡಬಹುದಿತ್ತು. ಅವರನ್ನು ಕರೆಸಿ 15ಕ್ಕೂ ಹೆಚ್ಚು ನಿಮಿಷಗಳ ಮಾತನಾಡಿದ್ದೇನೆ. ಕಲಾಪಕ್ಕೆ ಸಹಕರಿಸುವಂತೆ ಮನವಿ ಕೂಡ ಮಾಡಿದ್ದೇನೆ. ನಾವು ಈ ಬಗ್ಗೆ ಹೇಳುತ್ತೀವಿ ಎಂದವರು ಮತ್ತೆ ಹೇಳಲಿಲ್ಲ” ಎಂದು ಹೇಳಿದರು.
“ಬಿಲ್ಗಳನ್ನು ಪಾಸ್ ಮಾಡುವುದು ನಮ್ಮ ಮುಂದಿತ್ತು. ಆದ್ರೆ, ಧರಣಿಯ ನಡುವೆಯೂ ನಾವು ಬಿಲ್ ಪರಿಗಣಿಸಿದ್ದೆವು. ಅಧಿಕ ಸಮಯ ಧರಣಿಯಲ್ಲೇ ಕಳೆದುಹೋಯಿತು” ಎಂದು ಬಿಜೆಪಿ, ಜೆಡಿಎಸ್ ಶಾಸಕರ ನಡೆಗೆ ಸ್ಪೀಕರ್ ಯು.ಟಿ. ಖಾದರ್ ಬೇಸರ ವ್ಯಕ್ತಪಡಿಸಿದರು.