ಡೈಲಿ ವಾರ್ತೆ: 23 ಜುಲೈ 2023

ತುಂಬಿ ಹರಿಯುತ್ತಿದ್ದ ಸೇತುವೆಯಲ್ಲೇ ಪಿಕಪ್ ಚಾಲನೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳ- ಕೊಳ್ಳ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಈ ನಡುವೆ ಚಾಲಕನೊಬ್ಬ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಪಿಕಪ್ ಚಲಾಯಿಸಿ ಫಜೀತಿಗೆ ಸಿಲುಕಿದ ಪ್ರಸಂಗ ನಡೆದಿದೆ.

ಈ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ನಡೆದಿದೆ. ಕೆದಿಲ ಕಾಂತುಕೋಡಿ ಮುಳುಗು ಸೇತುವೆಯಲ್ಲಿ ಚಾಲಕ ಪಿಕಪ್ ಚಲಾಯಿಸಿ ನಡು ನೀರಿನಲ್ಲಿ ಸಿಲುಕಿಕೊಂಡಿದ್ದಾನೆ. ಕೂಡಲೇ ಎಚ್ಚೆತ್ತ ಸ್ಥಳೀಯರು ವಾಹನದಲ್ಲಿದ್ದವರ ರಕ್ಷಣೆ ಮಾಡಿದ್ದಾರೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕಪ್ ಚಾಲಕ ತಮ್ಮ ವಾಹನವನ್ನು ಚಲಾಯಿಸಿದ್ದಾನೆ. ಆದರೆ ನೀರು ಹೆಚ್ಚಾಗಿ ಸೇತುವೆಯ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದೆ. ತಕ್ಷಣ ಸ್ಥಳೀಯರು ಅದರೊಳಗಡೆ ಸಿಲುಕಿದವವರನ್ನು ರಕ್ಷಣೆ ಮಾಡಿದ್ದಾರೆ. ಪ್ರತೀ ವರ್ಷ ಮಳೆ ಬಂದಾಗ ಈ ಸೇತುವೆ ಮುಳುಗಡೆಯಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.