ಡೈಲಿ ವಾರ್ತೆ:31 ಜುಲೈ 2023

ಟ್ಯಾಂಕರ್ ಪಲ್ಟಿ: ಸಹಾಯ ಮಾಡದೇ ಎಣ್ಣೆಗಾಗಿ ಮುಗಿಬಿದ್ದ ಜನರು..!

ಗ್ವಾಲಿಯರ್: ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ವೊಂದು ಪಲ್ಟಿ ಹೊಡೆದಿದ್ದು, ಜನರು ಸಹಾಯ ಮಾಡದೇ ಪಾತ್ರೆಗಳಲ್ಲಿ ಎಣ್ಣೆಯನ್ನು ತುಂಬಿಕೊಳ್ಳಲು ಮುಗಿಬಿದ್ದಿರುವ ಘಟನೆ ಮಧ್ಯಪ್ರದೇಶದ ಭಿಂಡ್‌ನ ಮಿಹೋನಾ ಪ್ರದೇಶದಲ್ಲಿ ನಡೆದಿದೆ.

ಸಾಸಿವೆ ಎಣ್ಣೆಯನ್ನು ಹೊತ್ತೊಯ್ಯುತ್ತಿದ್ದ ಕಂಟೈನರ್ ಮೊರೆನಾದಿಂದ ಪಶ್ಚಿಮ ಬಂಗಾಳದ ಹಾರ್ಡಿಯಾ ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಸರಿಸುಮಾರು 31,400 ಲೀಟರ್ ಎಣ್ಣೆಯನ್ನು ಸಾಗಿಸಲಾಗುತ್ತಿತ್ತು. ಎದುರಿಗೆ ಜೋರಾಗಿ ಬಂದ ಡಂಪರ್ನಿಂದ ತಪ್ಪಿಸಿಕೊಳ್ಳಲು ಚಾಲಕ ಯತ್ನಸಿದ್ದು, ಈ ವೇಳೆ ವಾಹನ ಪಲ್ಟಿಯಾಗಿ ಸೋರಲು ಪ್ರಾರಂಭಿಸಿದೆ. ಕೂಡಲೇ ಗ್ರಾಮಸ್ಥರು ಖಾಲಿ ಪಾತ್ರೆಗಳನ್ನು ತುಂಬಿಕೊಳ್ಳಲು ಮುಗಿಬಿದ್ದಿದ್ದು. ಬಕೆಟ್‌ಗಳು, ಪಾತ್ರೆಗಳು ಮತ್ತು ಮಡಕೆಗಳನ್ನು ತಂದು ಎಣ್ಣೆಯನ್ನು ಒಯ್ದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಜನಸಂದಣಿಯನ್ನು ತಡೆಯಲು ಹರಸಾಹಸ ಪಟ್ಟರೂ ಸಾರ್ವಜನಿಕರು ತಮ್ಮ ಕೆಲಸವನ್ನು ಮುಂದುವರೆಸಿದ್ದರು.

ಕೆಸರು ಗದ್ದೆ ಮತ್ತು ಕಾಲುವೆ ನೀರಿನಲ್ಲಿ ಮಿಶ್ರಿತ ಎಣ್ಣೆಯನ್ನು ಸೇವಿಸುವುದರಿಂದ ಹಾನಿಯಾಗಬಹುದು ಎಂದು ಅಧಿಕಾರಿಗಳಿ ತಿಳಿಸಲು ಯತ್ನಿಸಿದರೂ ಜನರು ಅವರ ಮಾತಿಗೆ ಮಣೆ ಹಾಕದೇ ಎಣ್ಣೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಬೇಸತ್ತ ಪೊಲೀಸರು ಗುಂಪನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ.