ಡೈಲಿ ವಾರ್ತೆ:04 ಆಗಸ್ಟ್ 2023
ಬಂಟ್ವಾಳ: 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದೌರ್ಜನ್ಯ ಪ್ರಕರಣದ ಆರೋಪಿಯ ಬಂಧನ.
ಬಂಟ್ವಾಳ : ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿರುವ ಬಗ್ಗೆ ವರದಿಯಾಗಿದೆ .
ಪಾಣೆಮಂಗಳೂರು ಸಮೀಪದ ನರಿಕೊಂಬು ನಿವಾಸಿ ಪದ್ಮನಾಭ (54) ಬಂಧಿತ ಆರೋಪಿಯಾಗಿದ್ದು
ಈತನನ್ನು ಬಂಧಿಸಿರುವ ಬಂಟ್ವಾಳ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಘಟನೆಯ ವಿವರ.
1995 ರಲ್ಲಿ ಹಲ್ಲೆ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನರಿಕೊಂಬು ಗ್ರಾಮದ ನಿವಾಸಿಗಳಾದ ನಾರಯಣ ಸೋಮಯಾಜಿ, ವಿಠಲ, ಪದ್ಮನಾಭ ಹಾಗೂ ಸುರೇಶ ಸಪಲ್ಯ ಎಂಬವರ ಮೇಲೆ ಅಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಅರೋಪ ಕೂಡ ಸಾಬೀತಾಗಿತ್ತು. ಆದರೆ ಪ್ರಕರಣದ ಮೂರನೇ ಆರೋಪಿ ಪದ್ಮನಾಭ ತಲೆಮರೆಸಿಕೊಂಡಿದ್ದ, ಈತನ ವಿರುದ್ಧ ನ್ಯಾಯಾಲಯ ಬಂಧನದ ವಾರೆಂಟ್ ಜಾರಿ ಮಾಡುತ್ತಿದ್ದರೂ ಇದುವರೆಗೂ ಬಂಧನವಾಗಿರಲಿಲ್ಲ.
28 ವರ್ಷ ಕಳೆದ ನಂತರ ಹಳೆ ಬಾಕಿ ಪ್ರಕರಣದ ಈ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ನರಿಕೊಂಬು ಗ್ರಾಮದ ಬೀಟ್ ಪೊಲೀಸ್ ಪ್ರವೀಣ್ ಹಾಗೂ ಸಿಬ್ಬಂದಿ ಗಣೇಶ್ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 28 ವರ್ಷಗಳಿಂದ ಈ ಪ್ರಕರಣದ ತಲೆಮರೆಸಿರುವ ಆರೋಪಿ ಪದ್ಮನಾಭ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಶುಸಂಗೋಪನೆ ಇಲಾಖೆ ನೌಕರನಾಗಿದ್ದು ಈತನನ್ನು ಬಂಧಿಸುವಲ್ಲಿ ಪೋಲಿಸ್ ಅಧಿಕಾರಿಗಳು ಕೆಲವೊಂದು ಹಿತಾಸಕ್ತಿಗಳ ಒತ್ತಡದಿಂದ ಶ್ರಮವಹಿಸಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಪ್ರಕರಣದ ಆರೋಪಿಯಾಗಿದ್ದು ಸರಕಾರವನ್ನು ವಂಚಿಸಿ ಸರಕಾರಿ ಉದ್ಯೋಗ ಕೂಡ ಪಡೆದಿದ್ದ ಈತನ
ವಿರುದ್ಧ ತನಿಖೆ ನಡೆಸಿ ಸರಕಾರಿ ಉದ್ಯೋಗದಿಂದ ವಜಾ ಮಾಡಬೇಕು, ಕಳೆದ 28 ವರ್ಷಗಳಿಂದ ಬಂಟ್ವಾಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಸುಮಾರು ಇಪ್ಪತ್ತಕೂ ಹೆಚ್ಚೂ ಪೊಲೀಸ್ ಆಧಿಕಾರಿಗಳು ಈ ಪ್ರಕರಣವನ್ನು ಭೇದಿಸಲು ಶ್ರಮವಹಿಸದೇ ಇರುವ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.