ಡೈಲಿ ವಾರ್ತೆ:05 ಆಗಸ್ಟ್ 2023
ವರದಿ: ರವಿತೇಜ ಕಾರವಾರ
ಮನೆಯಲ್ಲೇ ಕುಳಿತು ಹಣ ಮಾಡುವ ಮೆಸೇಜ್‌ಗೆ ರಿಪ್ಲೈ ಮಾಡಿ 1.62 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಬಿಎಸ್‌ಎನ್‌ಎಲ್ ಉದ್ಯೋಗಿ
ಕಾರವಾರ: ವಾಟ್ಸಾಪ್‌ನಲ್ಲಿ ಅನ್‌ನೌನ್ ನಂಬರ್‌ನಿಂದ ಬಂದ ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ಎಂಬ ಮೆಸೇಜ್ ನೋಡಿ ಮರುಳಾದ ಕಾರವಾರ ನಗರದ ಬಿಎಸ್‌ಎನ್‌ಎಲ್ ಕಛೇರಿ ಉದ್ಯೋಗಿಯೋರ್ವರು ಲಕ್ಷಾಂತರ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ.
ಹರಿಯಾಣ ರಾಜ್ಯದ ಸಂದೀಪ ಕೃಷ್ಣ ಕುಮಾರ ಎಂಬಾತರೇ ಹಣ ಕಳೆದುಕೊಂಡವರಾಗಿದ್ದಾರೆ.
ಸದ್ಯ ಕಾರವಾರ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಇವರು ಸುಮಾರು 1.62 ಲಕ್ಷ ರೂ. ಹಣ ಕಳೆದುಕೊಂಡ ಬಗ್ಗೆ ಕಾರವಾರ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.
ಸಂದೀಪ ಅವರಿಗೆ ಆ.2 ರಂದು ವಾಟ್ಸಾಪ್‌ನಲ್ಲಿ ಅನ್‌ನೌನ್ ಸಂಖ್ಯೆಯಿಂದ ಸಂದೇಶವೊಂದು ಬಂದಿದ್ದು ಅದರಲ್ಲಿ ‘ಗೂಗಲ್‌ನಲ್ಲಿ ಹೊಟೇಲ್ ರಿವ್ಯೂ ಮಾಡಿ ಮನೆಯಲ್ಲೇ ಕುಳಿತು 2700 ರಿಂದ 6000 ರೂ.ವರೆಗೆ ಪ್ರತಿದಿನ ಹಣ ಗಳಿಸಬಹುದು ಎಂದು ನಮೂದಾಗಿತ್ತು. ಈ ಬಗ್ಗೆ ಅವರು ಕೆಲಸ ಮಾಡಲು ಒಪ್ಪಿಗೆ ಇದೆ ಎಂದು ರಿಪ್ಲೆ ಮಾಡಿದಾಗ ಟೆಲಿಗ್ರಾಂ ಲಿಂಕ್ ಬಂದಿದ್ದು ಅದನ್ನು ಓಪನ್ ಮಾಡಿದಾಗ ಚಾಟ್ ಮಾಡಿದ ಆರೋಪಿತರು ಅದರಲ್ಲಿ ವೈಯಕ್ತಿಕ ವಿವರ ಪಡೆದಿದ್ದಾರೆ. ಬಳಿಕ ಆರೋಪಿತರು 3 ಹೊಟೇಲ್‌ಗಳ ಲಿಂಕ್ ಕಳುಹಿಸಿ ಅವುಗಳಿಗೆ 5 ಸ್ಟಾರ್ ರಿವ್ಯೂ ನೀಡುವಂತೆ ಹೇಳಿದ್ದಾರೆ. ರಿವ್ಯೂ ನೀಡಿದ ಬಳಿಕ 150 ರೂ. ಗಳನ್ನು ವ್ಯಕ್ತಿಯ ಖಾತೆಗೆ ಜಮಾ ಮಾಡಲಾಗಿದೆ. ಇದಾದ ಬಳಿಕ ಆ.3 ರಂದು ಒಟ್ಟೂ 21 ಟಾಸ್ಕ್ಗಳನ್ನು ಪೂರ್ತಿಗೊಳಿಸಿದರೆ 1900 ರೂ. ನೀಡುವುದಾಗಿ ಆರೋಪಿತರು ತಿಳಿಸಿದ್ದು ಜೊತೆಗೆ 3 ಪ್ರಿಪೇಡ್ ಟಾಸ್ಕ್ ಮಾಡಿದರೆ ಹೆಚ್ಚಿನ ಲಾಭ ಬರುವುದಾಗಿ ಆಮಿಷವೊಡ್ಡಿದ್ದಾರೆ. ಇದನ್ನು ನಂಬಿದ ವ್ಯಕ್ತಿಯು ಆರೋಪಿತರು ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟೂ 1,62,000 ರೂ. ಗಳನ್ನು ಜಮಾ ಮಾಡಿದ್ದಾರೆ. ಆದರೆ ಆ ಬಳಿಕ ತಮಗೆ ಯಾವುದೇ ಲಾಭಾಂಶವೂ ಬಂದಿಲ್ಲ, ಡಿಪಾಸಿಟ್ ಮಾಡಿದ ಹಣವೂ ಬಂದಿಲ್ಲ ಎಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ತನಿಖೆ ಕೈಗೊಂಡಿದ್ದಾರೆ.