ಡೈಲಿ ವಾರ್ತೆ:06 ಆಗಸ್ಟ್ 2023

ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯ ಚಟುವಟಿಕೆಗಳಿಗೆ ಮಣಿಪಾಲ ಟ್ಯಾಪ್ಮಿಯ ನಿರ್ದೇಶಕ ಪ್ರೊ.ದುರ್ಗಾಪ್ರಸಾದ್‌ ಎಂ ಅವರಿಂದ ಚಾಲನೆ

ಬ್ರಹ್ಮಾವರ :ವಿದ್ಯಾರ್ಥಿಗಳು ತಮ್ಮ ತಾರ್ಕಿಕ ಆಲೋಚನಾ ಸಾಮರ್ಥ್ಯ ವೃದ್ಧಿಸಿ, ವಿಶ್ಲೇಷಣಾ ಸಾಮರ್ಥ್ಯವನ್ನು ಬಲಗೊಳಿಸಬೇಕಾಗಿದೆ  ಎಂದು ಮಣಿಪಾಲ ಟ್ಯಾಪ್ಮಿಯ ನಿರ್ದೇಶಕ ಪ್ರೊ.ದುರ್ಗಾಪ್ರಸಾದ್‌ ಎಂ ಹೇಳಿದರು.

ಮಣಿಪಾಲ ಟ್ಯಾಪ್ಮಿಯ ಸಭಾಂಗಣದಲ್ಲಿ ಶನಿವಾರ ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಠ್ಯ ಪುಸ್ತಕಗಳನ್ನು ಪರೀಕ್ಷೆಯ ಉತ್ತರದ ದೃಷ್ಟಿಯಿಂದ ಅಭ್ಯಾಸ ಮಾಡುವುದಕ್ಕಿಂತಲೂ ವಿಭಿನ್ನವಾಗಿ ವಿಶ್ಲೇಷಣೆ ಮಾಡಿ ಹೊಸ ಸಾಧ್ಯತೆಗಳನ್ನು ಕಂಡುಹಿಡಿಯುವ, ಹೊಸ ಶೈಕ್ಷಣಿಕ ಪದ್ಧತಿಯೆಡೆಗೆ ನಮ್ಮ ದೃಷ್ಟಿಕೋನ ಹರಿಸಬೇಕಾಗಿದೆ.  ವಿದ್ಯಾರ್ಥಿಗಳು ಸ್ವ ಪ್ರತಿಭೆಯಿಂದ ಅಭ್ಯಾಸ ಮಾಡಿದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಣಣ ವ್ಯವಸ್ಥೆಯನ್ನು ಉಡುಪಿ ಜಿಲ್ಲೆಯಲ್ಲೂ ನಾವು ಒದಗಿಸಲು ಸಾಧ್ಯ. ಈ ಸಂಬಂಧ ಜಿಲ್ಲೆಯ ಪಿಯು ಪರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮಣಿಪಾಲದ ಮಾಹೆ ಮತ್ತು ಟ್ಯಾಪ್ಮಿ ಕೌಶಲ್ಯ ಆಧಾರಿತ ತರಬೇತಿ ನೀಡಲು ಸಿದ್ಧವಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರ ಸಂಘದ ಅಧ್ಯಕ್ಷ ದಿನೇಶ ಕೊಡವೂರು ಸಂಘವು ಇನ್ನೂ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದರು.
ಇದೇ ಸಂದರ್ಭ ನಿವೃತ್ತರಾದ ಅದಮಾರು ಪಿಯು ಕಾಲೇಜಿನ ರಾಮಕೃಷ್ಣ ಪೈ, ಶಿರ್ವ ಸೈಂಟ್‌ ಮೇರಿಸ್‌ ಪಿಯು ಕಾಲೇಜಿನ ಅಮಾಂಡಾ ಮ್ಯೂರಲ್‌ ಸೀಕ್ವೆರಾ, ಕೊಲ್ಲೂರು ಮೂಕಾಂಬಿಕಾ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅರುಣ್‌ ಪ್ರಕಾಶ್‌ ಶೆಟ್ಟಿ ಮತ್ತು ಜಿಲ್ಲಾ ಉಪನಿರ್ದೇಶಕರ ಕಚೇರಿಯ ಕಚೇರಿ ಅಧೀಕ್ಷಕಿ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು.


ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ನೀಟ್‌, ಜೆಇಇ, ಕೆಸೆಟ್‌, ಸಿಇಟಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕೃರಿಸಲಾಯಿತು. ಶೇ.೯೦ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಮತ್ತು ಮೂಡುಬೆಳ್ಳೆ ಜ್ಞಾನಗಂಗಾ ಪಿಯು ಕಾಲೇಜಿನ ಪ್ರಾಂಶುಪಾಲ ಯು.ಎಲ್‌.ಭಟ್‌ ಶುಭ ಹಾರೈಸಿದರು.
ಸಂಘದ ಕಾರ್ಯದರ್ಶಿ ಡಾ.ದಯಾನಂದ ಪೈ, ಉಪಾಧ್ಯಕ್ಷ ನವೀನ ಕುಮಾರ್‌, ಕೋಶಾಧಿಕಾರಿ ಸಂದೀಪ್‌ ಕುಮಾರ್‌, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಯೋಜಕ ಐವಾನ್‌ ದೊನಾತ್‌ ಸುವಾರಿಸ್‌, ಪರೀಕ್ಷಾ ಸಂಯೋಜಕ ರಾಮದಾಸ ಪ್ರಭು ಉಪಸ್ಥಿತರಿದ್ದರು.
ಇನ್ನಂಜೆ ಎಸ್‌.ವಿ.ಎಚ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪುಂಡರೀಕ್ಷಾ ಕೊಡಂಚ ಕಾರ್ಯಕ್ರಮ ನಿರೂಪಿಸಿದರು.