ಡೈಲಿ ವಾರ್ತೆ:06 ಆಗಸ್ಟ್ 2023

ಕೋಟ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ

ಕರಾವಳಿ ಭಾಗದ ವಿದ್ಯಾರ್ಥಿಗಳು ಬ್ಯಾಂಕ್‌ ಮತ್ತು ಇಂಜಿನಿಯರ್‌, ಡಾಕ್ಟರ್‌ ಆಗುವ ಕನಸುಗಳನ್ನು ಹೊತ್ತು ಮುಂದೆ ಸಾಗುವುದರ ಬದಲು ಐಎಎಸ್‌, ಯು.ಪಿ.ಎಸ್.ಸಿ, ಕೆ.ಎ.ಎಸ್, ಪಿಡಿಓ ನಂತಹ ಹುದ್ದೆಗಳನ್ನು ಗಳಿಸುವತ್ತ ಗಮನ ಹರಿಸಲಿ ಎಂದು ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಹೇಳಿದರು.
ಕೋಟ ವಿವೇಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಕೋಟದ ವಿ ಶೈನ್‌ ಕೋಚಿಂಗ್‌ ಸೆಂಟರ್‌ ಮತ್ತು ಸಾಯಿಬ್ರಕಟ್ಟೆ ರೋಟರಿ ಕ್ಲಬ್‌ ವತಿಯಿಂದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಲೆಕ್ಕ ಸಹಾಯಕ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಪರೀಕ್ಷೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ನಮ್ಮ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದು, ಇಂತಹ ಕೋಚಿಂಗ್‌ ಸೆಂಟರ್‌ಗಳು ವಿದ್ಯಾರ್ಥಿಗಳಿಗೆ ಅತೀ ಅವಶ್ಯಕವಾಗಿದೆ ಎಂದು ಅವರು ಹೇಳಿದರು.

ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್‌ ಆರ್‌ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕನಸು ಕಾಣಬೇಕು. ಕನಸಿನೊಂದಿಗೆ ಸ್ವ ಪ್ರಯತ್ನ ಅತೀ ಅಗತ್ಯ. ನಮ್ಮ‌  ಜೀವನದ ಗುರಿಗಳಿಗೆ ನಿರ್ಧಾರಗಳು ಬಹು ಮುಖ್ಯ. ನಮ್ಮಲ್ಲಿರುವ ಶಕ್ತಿ ಬಗ್ಗೆ ನಮಗೆ ಅರಿವು ನಮಗಿರಬೇಕು. ಆ ಶಕ್ರಿಯೇ ನಮ್ಮನ್ನು ಮುನ್ನಡೆಸುತ್ತದೆ ಎಂದು ಕಿವಿ ಮಾತು ಹೇಳಿದರು.

ಇದೇ ಸಂದರ್ಭ ಜನಾಧಿಕಾರ ಪುಸ್ತಕದ ಲೇಖಕ, ಪಂಚಾಯತ್‌ ರಾಜ್‌ ತಜ್ಞ ಜನಾರ್ಧನ ಮರವಂತೆ ಅವರನ್ನು ಸನ್ಮಾನಿಸಲಾಯಿತು.
ಮಣೂರು ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ ಕುಂದರ್‌, ಕುಂದಾಪುರದ ತಹಶೀಲ್ದಾರ್‌ ಶೋಭಾಲಕ್ಷ್ಮೀ ಎಚ್‌.ಎಸ್‌, ಕೋಟ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಶಂಭು ಲಿಂಗಯ್ಯ, ಬೆಂಗಳೂರಿನ ಚಾರ್ಟೆಡ್‌ ಅಕೌಟೆಂಟ್‌ ರಾಘವೇಂದ್ರ ಕಟ್ಕೆರೆ, ಸಾಯಿಬ್ರಕಟ್ಟೆ ರೋಟರಿ ಕ್ಲಬ್‌ ಅಧ್ಯಕ್ಷೆ ಯಶಸ್ವಿನಿ ಹೆಗ್ಡೆ, ರೋಟರಿಯ ಜಿಲ್ಲಾ ಸಹಾಯಕ ಗವರ್ನರ್‌ ಅಲ್ವಿನ್‌ ಕ್ವಾಡ್ರಸ್‌, ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲ  ಜಗದೀಶ ನಾವುಡ, ಪ್ರಿಯ ಅಸೋಸಿಯೇಟ್ಸ್‌ನ ಮುಖ್ಯಸ್ಥ ಅಕ್ಷತ್‌ ರಾಜ್‌, ಕೊಲ್ಲೂರು ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಜಯಶ್ರೀ, ಗಿರೀಶ್‌ ಕುಮಾರ್‌ ಶೆಟ್ಟಿ, ವಿವೇಕ್‌ ಅಮೀನ್‌ ಇದ್ದರು.
ಸಾಯಿಬ್ರಕಟ್ಟೆ ರೋಟರಿ ಕಾರ್ಯದರ್ಶಿ ಅಲ್ತಾರು ಗೌತಮ ಹೆಗ್ಡೆ ಸ್ವಾಗತಿಸಿದರು. ವಿ ಶೈನ್‌ ಕೋಚಿಂಗ್‌ ಸೆಂಟರ್‌ನ ಮುಖ್ಯಸ್ಥ ಹರೀಶ ಕುಮಾರ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಾಪಕ ನರೇಂದ್ರ ಕುಮಾರ್‌ ಕೋಟ ಕಾರ್ಯಕ್ರಮ ನಿರೂಪಿಸಿದರು.