ಡೈಲಿ ವಾರ್ತೆ:06 ಆಗಸ್ಟ್ 2023

ಅಮ್ಟಾಡಿ : ದೇವಸ್ಥಾನದ ಸಹಾಯಕ ಅರ್ಚಕ ಜಗನ್ನಾಥ ಕೆ.ವಿ ನಾಪತ್ತೆ.

ಬಂಟ್ವಾಳ : ತಾಲೂಕಿನ ಅಮ್ಟಾಡಿ ಗ್ರಾಮದ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಾಯಕ ಅರ್ಚಕ ಜಗನ್ನಾಥ ಕೆ.ವಿ (35) ಎಂಬವರು ಕಳೆದ 10 ತಿಂಗಳಿನಿಂದ ಕಾಣೆಯಾಗಿರುವ ಬಗ್ಗೆ ಅವರ ಸಹೋದರ, ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಕೆ.ವಿ ಅವರು ತಡವಾಗಿ ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಕಳೆದ 7 ವರ್ಷಗಳಿಂದ ಅಮ್ಟಾಡಿ ಗ್ರಾಮದ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೆಲಸ ಮಾಡುತ್ತಿದ್ದು, ದೇವಸ್ಥಾನದ ಬಳಿಯೇ ವಾಸವಾಗಿರುತ್ತೇನೆ. ನನ್ನ ಜೊತೆ ಕಿರಿಯ ಸಹೋದರ ಜಗನ್ನಾಥ ಕೆ.ವಿ ಕೂಡಾ 2022 ರ ಜೂನ್ ತಿಂಗಳಿನಿಂದ ಇಲ್ಲೇ ಸಹಾಯಕ ಅರ್ಚಕನಾಗಿ ನನ್ನ ಜೊತೆ ಕೆಲಸಕ್ಕೆ ಸೇರಿಕೊಂಡಿದ್ದ. ಈತ ಅರ್ಚಕ ವೃತ್ತಿಯ ಜೊತೆ ಎಲ್ಲ ಕಡೆ ಸುತ್ತಾಡುತ್ತಿದ್ದ. 3 ತಿಂಗಳು ನನ್ನ ಜೊತೆ ಇದ್ದ ಈತ ಕಳೆದ 2022 ಜೂನ್ 15 ರಂದು ಸ್ವಂತ ಊರಾದ ಕಾಸರಗೋಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ಅತ್ತ ಮನೆಗೂ ಹೋಗದೆ, ಇತ್ತ ದೇವಸ್ಥಾನಕ್ಕೂ ಮರಳಿ ಬಾರದೆ ನಾಪಪತ್ತೆಯಾಗಿರುತ್ತಾನೆ.

ಈತ ಈ ಹಿಂದೆಯೂ ಮನೆಯಲ್ಲಿ ಹೇಳದೆ ಹೋಗುವ ಅಭ್ಯಾಸ ಹೊಂದಿದ್ದ. ಎಲ್ಲಿಯಾದರೂ ಹೋಗಿ ದೇವರ ಧ್ಯಾನ, ಪೂಜೆ ಮಾಡುತ್ತಿದ್ದ. ಈ ಹಿಂದೆ ಉತ್ತರಾಖಂಡ ಜಿಲ್ಲೆಯ ಕಾಳಿಮಠದ ಗ್ರಾಮ ಅಂಡೆಯ ಮನ್ನಣ್ಣ ಮಾಯೆ ದೇವಸ್ಥಾನದಲ್ಲೂ ಪೂಜೆ ಮಾಡುತ್ತಿದ್ದ. ಈತ ಅವಿವಾಹಿತನಾಗಿದ್ದು, ಎಲ್ಲಿಯಾದರೂ ಪೂಜೆ ಮಾಡುತ್ತಿರಬಹುದೆಂದು ಹೆಚ್ಚು ಹುಡುಕಾಟಕ್ಕೆ ಇಳಿದಿರಲಿಲ್ಲ. ಇದೀಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಇದರಿಂದ ಇದೀಗ ತಡವಾಗಿ ಠಾಣೆಗೆ ದೂರು ನೀಡುತ್ತಿರುವುದಾಗಿ ಪ್ರಧಾನ ಅರ್ಚಕ, ಸಹೋದರ ಕೃಷ್ಣ ಕೆ.ವಿ ಅವರು ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.

*ತಂದೆಗೆ ನಾಲ್ವರು ಪತ್ನಿಯರು, 13 ಮಂದಿ ಮಕ್ಕಳು.*

*ಈ ಬಗ್ಗೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿರುವ ಕೃಷ್ಣ ಕೆ.ವಿ ಅವರು, ನಾನು ಮೂಲತಃ ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಕೂಡ್ಲು ಗ್ರಾಮದ ಅಡ್ಕತಬೈಲು ನಿವಾಸಿಯಾಗಿದ್ದು, ನಮ್ಮ ತಂದೆ ದಿವಂಗತ ವಿಷ್ಣು ಅರಳಿತ್ತಾಯ ಅವರು 4 ಮದುವೆಯಾಗಿದ್ದು, ಮೊದಲೆರಡು ಪತ್ನಿಯರಲ್ಲಿ ಮಕ್ಕಳಿಲ್ಲದ ಕಾರಣ ಮೂರನೇ ಮದುವೆಯಾಗಿರುತ್ತಾರೆ. ಅದರಲ್ಲಿ 2 ಹೆಣ್ಣು, ಒಂದು ಗಂಡು ಸಹಿತ 3 ಮಂದಿ ಮಕ್ಕಳಿದ್ದು, ಬಳಿಕ ನಾಲ್ಕನೇ ಪತ್ನಿಯಾಗಿ ನನ್ನ ತಾಯಿ ಲಲಿತಾ ಅವರನ್ನು ಮದುವೆಯಾಗಿದ್ದು, ನನ್ನ ತಾಯಿಯವರಿಗೆ 5 ಗಂಡು, 5 ಹೆಣ್ಣು ಸಹಿತ ಒಟ್ಟು 10 ಮಂದಿ ಮಕ್ಕಳಿರುತ್ತೇವೆ, ಗಂಡು ಮಕ್ಕಳ ಪೈಕಿ ಮೂರು ಮಂದಿ ಬೇರೆ ಬೇರೆ ಕೆಲಸದಲ್ಲಿದ್ದು ನಾನು ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೆಲಸ ಮಾಡುತ್ತಿದ್ದು, ನನ್ನ ಜೊತೆ ಕಿರಿಯ ಸಹೋದರ ಜಗನ್ನಾಥ ಕೆ.ವಿ ಕೂಡಾ 2022 ರ ಜೂನ್ ತಿಂಗಳಿನಿಂದ ಇಲ್ಲೇ ಸಹಾಯಕ ಅರ್ಚಕನಾಗಿ ನನ್ನ ಜೊತೆ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ.*